ಸಚಿನ್-ಲತಾಗೆ ಅವಮಾನ
ಮುಂಬೈ, ಮೇ 30: ಬಿಜೆಪಿ ನಾಯಕ ಆಶಿಷ್ ಶೇಲಾರ್ ದಾಖಲಿಸಿದ ದೂರೊಂದರನ್ವಯ ಹಾಸ್ಯನಟ ತನ್ಮಯ ಭಟ್ ವಿರುದ್ಧ ತನಿಖೆಯೊಂದನ್ನು ನಡೆಸುವಂತೆ ಮುಂಬೈ ಪೊಲೀಸ್ ಆಯುಕ್ತ ದತ್ತಾ ಪಡ್ಸಲ್ಗಿಕರ್ ಆದೇಶ ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಮೇ 26ರಂದು ಪೋಸ್ಟ್ ಮಾಡಿದ್ದ ವೀಡಿಯೊ ಒಂದರಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಹಾಗೂ ದಂತಕತೆ ಹಾಡುಗಾರ್ತಿ ಲತಾ ಮಂಗೇಶ್ಕರ್‌ರನ್ನು ಅಣಕಿಸಿದ ಮತ್ತು ಅವಮಾನಿಸಿದ ಆರೋಪ ಅವರ ಮೇಲಿದೆ.
ಪ್ರಕರಣದ ಕುರಿತು ಮುಂಬೈ ಪೊಲೀಸ್‌ನ ವಿಶೇಷ ಶಾಖೆ ತನಿಖೆ ಕೈಗೊಳ್ಳಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಉಪಾಯುಕ್ತ ಹಾಗೂ ಮುಂಬೈ ಪೊಲೀಸ್‌ನ ವಕ್ತಾರ ಸಂಗ್ರಾಮಸಿಂಹ ನಿಶಾನ್ದಾರ್ ತಿಳಿಸಿದ್ದಾರೆ.
ವೀಡಿಯೊದಲ್ಲಿ ಭಟ್, ಸಚಿನ್ ಹಾಗೂ ಲತಾರಂತೆ ಮುಖಭಾವ ತೋರಿಸಿ ಅವರಿಬ್ಬರ ನಡುವೆ ಕಾಲ್ಪನಿಕ ಸಂಭಾಷಣೆಯೊಂದನ್ನು ಅಭಿನಯಿಸಿದ್ದರು. ಲತಾ ಮಂಗೇಶ್ಕರ್‌ರ ಅನುಕರಣೆ ಮಾಡುತ್ತ ಅವರು, ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ತೆಂಡುಲ್ಕರ್‌ಗಿಂತ ಉತ್ತಮ ಎಂದು ಹೇಳಿದ್ದರು. ಅದಕ್ಕೆ ತೆಂಡುಲ್ಕರ್ ಪಾತ್ರದಲ್ಲಿ ಉತ್ತರ ನೀಡಿದ್ದ ಭಟ್, ಲತಾರಿಗೆ ‘‘ನೀವು 5 ಸಾವಿರ ವರ್ಷ ಹಳೆಯವರು’’ ಎಂದಿದ್ದರು. ಇಬ್ಬರು ಖ್ಯಾತನಾಮರನ್ನು ವೀಡಿಯೊದಲ್ಲಿ ಅವಮಾನಿಸಿದ ಆರೋಪದಲ್ಲಿ ಭಟ್ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು.
ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ತೆಂಡುಲ್ಕರ್ ಹಾಗೂ ಲತಾ ಮಂಗೇಶ್ಕರ್ ತನ್ಮಯ ಭಟ್ ಅವಮಾನಿಸಿದ್ದಾರೆ. ಅವರನ್ನು ತಕ್ಷಣ ಬಂಧಿಸುವಂತೆ ತಾವು ಆಗ್ರಹಿಸುತ್ತಿದ್ದೇವೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಉಪಾಧ್ಯಕ್ಷ ಸಂಜಯ್ ಖೋಪ್ಕರ್ ಹೇಳಿದ್ದಾರೆ.
ಅವರು ಈ ಸಂಬಂಧ ಸೋಮವಾರ ಶಿವಾಜಿ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.