ಆಡಳಿತ ವೈದ್ಯಾಧಿಕಾರಿಗೆ ವಸತಿಗೃಹ ನೀಡದ ಸಹಾಯಕ ಅಧಿಕಾರಿ: ಶಾಸಕರಿಂದ ತರಾಟೆ

Update: 2016-05-31 14:15 GMT

ಪುತ್ತೂರು, ಮೇ 31: ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ.ಪ್ರದೀಪ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಗೆ ಸಿಗಬೇಕಾಗಿದ್ದ ವಸತಿಗೃಹದಲ್ಲಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿ ಯೋಗಾನಂದ ಎಂಬವರು ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದು, ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ಸಾಕಷ್ಟು ಮನವಿ ಸಲ್ಲಿಸಿದ್ದರೂ ಈ ತನಕ ಬಿಟ್ಟುಕೊಟ್ಟಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಮಂಗಳವಾರ ಅಧಿಕಾರಿಯನ್ನು ತರಾಟೆಗೆತ್ತಿಕೊಂಡ ಶಾಸಕಿ ಶಕುಂತಳಾ ಶೆಟ್ಟಿ ಅವರು ತಕ್ಷಣವೇ ಮನೆಯನ್ನು ಬಿಟ್ಟುಕೊಡುವಂತೆ ಸೂಚನೆ ನೀಡಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆಂದೇ ಆಸ್ಪತ್ರೆಯ ಪಕ್ಕದಲ್ಲೇ ಪ್ರತ್ಯೇಕ ವಸತಿ ಗೃಹ ವ್ಯವಸ್ಥೆ ಮಾಡಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿರುವ ಯೋಗಾನಂದ ವಾಸ್ತವ್ಯವಿದ್ದಾರೆ.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾ. ಪ್ರದೀಪ್ ವಸತಿಗೃಹವನ್ನು ತಮಗೆ ನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಬರೆದುಕೊಂಡಿದ್ದರೂ ಪ್ರಯೋಜನವಾಗದ ಕಾರಣ ಅವರು ಬಾಡಿಗೆ ಮನೆಯನ್ನು ಅವಲಂಬಿಸಬೇಕಾಗಿ ಬಂದಿತ್ತು. ಯೋಗಾನಂದ ವಸತಿಗೃಹವನ್ನು ಬಿಟ್ಟುಕೊಡುವ ಗೋಜಿಗೆ ಹೋಗದ ಕಾರಣ ಡಾ. ಪ್ರದೀಪ್ ಪುತ್ತೂರು ನಗರದ ಬೊಳುವಾರಿನಲ್ಲಿ ಮನೆ ಮಾಡಿಕೊಂಡಿದ್ದರು. ಈ ನಡುವೆ ಆಸ್ಪತ್ರೆಯ ವಸತಿಗೃಹ ಲಭಿಸುವುದೆಂಬ ಭರವಸೆ ಸಿಕ್ಕಿದ ಕಾರಣ ಅವರು ಆ ಬಾಡಿಗೆ ಮನೆಯನ್ನು ಬಿಡುವ ನಿರ್ಧಾರವನ್ನು ಮನೆ ಮಾಲಿಕರಿಗೆ ತಿಳಿಸಿದ್ದರು. ಆದರೆ ಅವರಿಗೆ ಆಸ್ಪತ್ರೆಯ ವಸತಿಗೃಹವನ್ನು ಯೋಗಾನಂದ ಬಿಟ್ಟುಕೊಡಲಿಲ್ಲ. ಇದರಿಂದಾಗಿ ಅಲ್ಲಿನ ಬಾಡಿಗೆ ಮನೆಯನ್ನೂ ಕಳಕೊಂಡ ಡಾ.ಪ್ರದೀಪ್ ಪ್ರಸ್ತುತ ವಿಟ್ಲದಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದಾರೆ.

ಈ ವಿಚಾರ ಮಂಗಳವಾರ ಶಾಸಕಿ ಶಕುಂತಳಾ ಶೆಟ್ಟಿ ಅವರು ಆಸ್ಪತ್ರೆಗೆ ಬೇಟಿ ನೀಡಿ ಸಮಸ್ಯೆಗಳ ಕುರಿತು ವೈದ್ಯರೊಂದಿಗೆ ಸಮಾಲೋಚಿಸಿದ ಸಂದರ್ಭದಲ್ಲಿ ಬಹಿರಂಗಗೊಂಡಿದೆ. ಯೋಗಾನಂದ ಮಕ್ಕಳ ವಿದ್ಯಾಭ್ಯಾಸದ ನೆಪ ಮುಂದಿಟ್ಟುಕೊಂಡು ವಸತಿಗೃಹವನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವೂ ಬಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News