×
Ad

94ಸಿ ಅರ್ಜಿಗೆ ಕಂದಾಯ ಅಧಿಕಾರಿಗಳಿಂದ ಲಂಚ ವಸೂಲಿ: ಹೋರಾಟದ ಎಚ್ಚರಿಕೆ

Update: 2016-05-31 20:01 IST

ಪುತ್ತೂರು, ಮೇ 31: 94ಸಿಯಡಿ ನ್ಯಾಯಯುತವಾಗಿ ನಿವೇಶನ ಹಕ್ಕುಪತ್ರ ಸಿಗಬೇಕಾದವರಿಗೆ ಇಂದು ಸಿಗುತ್ತಿಲ್ಲ. ಲಂಚ ನೀಡಿದವರಿಗೆ ಮಾತ್ರ ಸಿಗುತ್ತಿದ್ದು, ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಾಫಿಯಾವೇ ನಡೆಯುತ್ತಿದೆ. ಕಂದಾಯ ಇಲಾಖೆ ಭ್ರಷ್ಟಾಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಹೋರಾಟ ನಡೆಸಲಿದೆ ಎಂದು ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 94ಸಿ ಅರ್ಜಿ ನೀಡಿದ ವ್ಯಕ್ತಿಗಳ ಮುಂದೆ ಹಣಕ್ಕೆ ಬೇಡಿಕೆ ಇಡುವುದು ದೊಡ್ಡ ದಂಧೆಯಾಗಿದೆ. ಬಿಳಿನೆಲೆ, ಶಿಶಿಲ, ಶಿರಾಡಿ, ಕೋಣಾಜೆ, ಕೊಂಬಾರು, ಸಿರಿಬಾಗಿಲು, ಕೊಲ್ಲಮೊಗ್ರು, ಚಾರ್ಮಾಡಿ ಮೊದಲಾದ ಪ್ರದೇಶಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಅರ್ಜಿದಾರರಿಂದ 3ಸಾವಿರದಿಂದ 10 ಸಾವಿರ ರೂ.ವರೆಗೆ ಬೇಡಿಕೆ ಮುಂದಿಟ್ಟು ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.

ಸರಕಾರಿ ಭೂಮಿ ಬಿಟ್ಟು ಉಳಿದ ಭೂಮಿಯನ್ನು ನಿವೇಶನಕ್ಕೆ ನೀಡುವಂತಿಲ್ಲ. ಇದನ್ನು ಪರಿಶೀಲನೆ ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಮಾತ್ರವಿದೆ. ಲಂಚ ನೀಡಿದರೆ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಕ್ಕೂ ಹಕ್ಕುಪತ್ರ ನೀಡುತ್ತಾರೆ. ಲಂಚ ನೀಡದವರ ಅರ್ಜಿಯನ್ನು ಪರಿಶೀಲನೆಗಾಗಿ ಅರಣ್ಯ ಇಲಾಖೆಗೆ ಕಳುಹಿಸಿಕೊಡುತ್ತಾರೆ ಎಂದು ದೂರಿದ ಅವರು ಅರಣ್ಯ, ಗೋಮಾಳ, ಡಿಸಿ ಮನ್ನಾ ಜಾಗಕ್ಕೆ ಸಂಬಂಧಿಸಿ ಹಕ್ಕು ಪತ್ರ ನೀಡಿದರೂ ಅದು ಮಾನ್ಯವಾಗುವುದಿಲ್ಲ. ಮುಂದೆ ಒಂದಲ್ಲಾ ಒಂದು ದಿನ ಸಮಸ್ಯೆ ಆಗಿಯೇ ಆಗುತ್ತದೆ ಎಂಬ ವಿಚಾರ ಜನತೆಗೆ ತಿಳಿದಿರಬೇಕು ಎಂದರು.

ಪಶ್ಚಿಮ ಘಟ್ಟಕ್ಕೆ ತಾಗಿಕೊಂಡಿರುವ ದ.ಕ. ಉಡುಪಿ, ಹಾಸನ ಜಿಲ್ಲೆಯ ಹೆಚ್ಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಗಡಿ ಗುರುತು ಹಾಕಿದ್ದು, ಇದರ ಸಮೀಪ ನೂರಾರು ವರ್ಷದಿಂದ ಮನೆ ಕಟ್ಟಿ ವಾಸವಾಗಿದ್ದಾರೆ. ಇಂತಹ ಬಡವರಿಗೆ ಹಕ್ಕುಪತ್ರ ನೀಡುವ ಕೆಲಸ ನಡೆಯುತ್ತಿಲ್ಲ. ಲಂಚ ನೀಡಿದರೆ ಮಾತ್ರ ಕೆಲಸ ಎಂಬ ಧೋರಣೆಯಿಂದ, ಬಡವರು ವಂಚಿತರಾಗಿದ್ದಾರೆ. ರಾಜಕೀಯ ಪಕ್ಷದ ಪ್ರತಿನಿಧಿಗಳು ಅಧಿಕಾರಿಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ನಮ್ಮ ವಿರುದ್ದ ಅರ್ಜಿದಾರರು ತಿರುಗಿ ಬೀಳುವ ಪ್ರಯತ್ನವನ್ನು ಕೂಡ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೋರಾಟ ಸಮಿತಿ ಮಾಡಿಕೊಂಡವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಈ ವಿಚಾರದಲ್ಲಿ ಈಗಾಗಲೇ ಶಿರಾಡಿಯಲ್ಲಿ ಸಾಂಕೇತಿಕ ಹೋರಾಟ ಆರಂಭಿಸಿದ್ದು, ಜನ ಜಾಗ್ರತರಾಗಬೇಕೆನ್ನುವುದು ನಮ್ಮ ಉದ್ದೇಶ. ಲಂಚ ನೀಡಿ ಹಕ್ಕುಪತ್ರ ಪಡೆದುಕೊಂಡವರು ಮುಂದೆ ವಂಚಿತರಾಗಲಿದ್ದು, ಎಲ್ಲಾ ಗ್ರಾಮದ ಅರ್ಜಿಗಳನ್ನು ಅರಣ್ಯ ಇಲಾಖೆಗೆ ಪರಿಶೀಲಿಸಲು ಕಳುಹಿಸಬೇಕು. ಪರಿಶೀಲನೆಯ ಬಳಿಕವೇ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಲಂಚ ಪಡೆಯದೆ ಹಕ್ಕು ಪತ್ರ ನೀಡುವ ಕೆಲಸ ನಡೆಯಬೇಕು ಎಂದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. ವಿಶೇಷ ಕಾನೂನು ಜಾರಿಗೊಳಿಸಿ ಎಲ್ಲರಿಗೂ ಹಕ್ಕುಪತ್ರ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ವೇದಿಕೆ ಸದಸ್ಯರಾದ ಜಯಪ್ರಕಾಶ್ ಕೂಜುಗೋಡು, ಪ್ರದೀಪ್ ಸಿ.ಡಿ., ಪುರುಷೋತ್ತಮ ಕೋಲ್ಪೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಉಗ್ರಕ್ರಾಂತಿಗೆ ದಾರಿ

 ಈ ಹಿಂದೆ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಭೀತಿ ಇರಲಿಲ್ಲ. ಕುದುರೆಮುಖ ಯೋಜನೆ, ಕಸ್ತೂರಿ ರಂಗನ್ ವರದಿ ಬರುತ್ತಿದ್ದಂತೆ ನಕ್ಸಲ್ ಭೀತಿ ಸೃಷ್ಟಿಯಾಯಿತು. ಇದೀಗ 94ಸಿ ಅಡಿ ಲಂಚ ನೀಡಿದ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನು ಮುಂದುವರಿದಲ್ಲಿ ಉಗ್ರಕ್ರಾಂತಿಗೂ ದಾರಿಯಾದೀತು ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News