×
Ad

ಕರ್ನಿರೆಯಲ್ಲಿ ಖರ್ಜೂರ ಫಸಲು!

Update: 2016-05-31 20:48 IST

ಪಡುಬಿದ್ರೆ, ಮೇ 31: ಸುಡುಬಿಸಿಲಿನ ಮರುಭೂಮಿಯಲ್ಲಿ ಹೇರಳವಾಗಿ ಬೆಳೆಯುವ ಖರ್ಜೂರ ಕರ್ನಾಟಕದ ಕರಾವಳಿಯಲ್ಲೂ ಅಪರೂಪವೆಂಬಂತೆ ಬೆಳೆಯುವ ಮೂಲಕ ಅಚ್ಚರಿಮೂಡಿಸಿದೆ.

ಪಲಿಮಾರಿನ ಕರ್ನಿರೆಯಲ್ಲಿ ಖರ್ಜೂರ ಫಸಲು ನೀಡಿದೆ. ಕರ್ನಿರೆಯ ನದಿ ತೀರದಲ್ಲಿರುವ ಕೆ.ಎಸ್.ಸೈಯದ್ ಹಾಜಿ ಕರ್ನಿರೆಯವರ ಬಿಗ್ ಹೌಸ್‌ನ ವರಾಂಡ ಈ ಅಪರೂಪದ ಬೆಳೆಗೆ ಸಾಕ್ಷಿಯಾಗಿದೆ. ಸೈಯದ್ ಹಾಜಿಯವರ ಪುತ್ರರು ಪ್ರತಿಷ್ಠಿತ ಎಕ್ಸ್‌ಪರ್ಟೈಸ್ ಕಂಪೆನಿಯ ಮೂಲಕ ಅನಿವಾಸಿ ಉದ್ಯಮಿಗಳಾಗಿ ಖ್ಯಾತರಾಗಿದ್ದಾರೆ.

ಸೈಯದ್ ಹಾಜಿಯವರ ಮನೆಯಂಗಳದಲ್ಲಿರುವ 12 ಖರ್ಜೂರದ ಗಿಡಗಳ ಪೈಕಿ ನಾಲ್ಕರಲ್ಲಿ ಖರ್ಜೂರು ಭರ್ಜರಿ ಫಸಲು ಬಂದಿದೆ. ಕಳೆದ ಎರಡು ತಿಂಗಳಿಂದಲೂ ನಿರಂತರ ಫಸಲು ಬಂದಿದ್ದು, ಇತ್ತೀಚೆಗೆ ಬಿದ್ದ ಮಳೆ ಕಾರಣ ಫಸಲು ಕಡಿಮೆಯಾಗಿದೆ.

‘‘ಎರಡು ವರ್ಷಗಳ ಹಿಂದೆ ಮನೆಯ ಉದ್ಯಾನವನದಲ್ಲಿ ನೆಡುವುದಕ್ಕಾಗಿ ಗೋವಾದ ನರ್ಸರಿಯಿಂದ ಖರ್ಜೂರದ ಗಿಡಗಳನ್ನು ಖರೀದಿಸಿ ತಂದಿದ್ದೆವು. ಅದರಂತೆ ಅವುಗಳನ್ನು ಮನೆಯ ಎದುರಿನ ಉದ್ಯಾನವನದಲ್ಲಿ ನೆಟ್ಟೆವು. ಫಸಲು ಪಡೆಯುವ ಉದ್ದೇಶವಿರಲಿಲ್ಲ. ಆದರೆ ಇತ್ತೀಚೆಗೆ ಖರ್ಜೂರದ ಗಂಡು ಮರವೊಂದು ಹೂ ಬಿಟ್ಟಾಗ ಖರ್ಜೂರ ಬೆಳೆಯ ಬಗ್ಗೆ ಸೌದಿಯಲ್ಲಿ ಅಧ್ಯಯನ ನಡೆಸಿದ್ದ ಕಾಟಿಪಳ್ಳದ ಪಿ.ಇ.ಮುಹಮ್ಮದ್‌ರನ್ನು ಸಂಪರ್ಕಿಸಿದೆವು. ಮುಹಮ್ಮದ್ ಆಗಮಿಸಿ ಗಿಡಗಳ ಆರೈಕೆ ಮಾಡಿದ್ದರು. ಎರಡು ವಾರಗಳಲ್ಲಿ ಮರದಲ್ಲಿ ಫಸಲು ಕಂಡುಬಂತು’’ ಎಂದು ಸೈಯದ್ ಹಾಜಿಯವರ ಪುತ್ರ ಮುಹಮ್ಮದ್ ಅಶ್ರಫ್ ಹೇಳುತ್ತಾರೆ.

28 ವರ್ಷಗಳ ಕಾಲ ಸೌದಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪಿ.ಇ.ಮುಹಮ್ಮದ್ ಕಾಟಿಪಳ್ಳ ಸೌದಿಯಲ್ಲಿ ಖರ್ಜೂರ ಗಿಡಗಳ ಆಸಕ್ತಿ ಬೆಳೆದು ಅದರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇಲ್ಲಿನ ವಾತಾವರಣದಲ್ಲೂ ಖರ್ಜೂರ ಬೆಳೆಯಾಗಿರುವುದು ಅಚ್ಚರಿ ಮೂಡಿಸಿದೆ. ಕರಾವಳಿಯ ಸಮುದ್ರ ತೀರದಲ್ಲಿ ಮರಳು ಮತ್ತು ಉಪ್ಪಿನಾಂಶ ಇರುವುದರಿಂದ ಖರ್ಜೂರ ಫಸಲು ಬರಲು ಸಾಧ್ಯ. ಖರ್ಜೂರದ ಗಿಡಗಳಲ್ಲಿ ಸಾವಿರಕ್ಕೂ ಅಧಿಕ ಜಾತಿಗಳಿವೆ. ಖರ್ಜೂರ ಗಿಡದಲ್ಲಿ ಗಂಡು ಹೆಣ್ಣು ಎಂಬ ಎರಡು ಗಿಡಗಳಿರುತ್ತವೆ. ಗಂಡು ಗಿಡದಲ್ಲಿ ಹೂಬಿಟ್ಟ ತಕ್ಷಣ ಕೆಲವೊಂದು ವಿಧಾನಗಳ ಮೂಲಕ ಹೆಣ್ಣು ಗಿಡದ ಆರೈಕೆ ಮಾಡಿಕೊಳ್ಳಬೇಕು. ಬಳಿಕ ಹೆಣ್ಣು ಗಿಡದಲ್ಲಿ ಫಸಲು ಬರುತ್ತದೆ ಎನ್ನುತ್ತಾರೆ.

ಬೆಳೆಯುವುದು ಅಪರೂಪ

ಉಡುಪಿಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಕಾಶ್ ಭಾಗವತ್ ಪತ್ರಿಕೆಯೊಂದಿಗೆ ಮಾತನಾಡಿ, ಇಲ್ಲಿನ ವಾತಾವರಣಕ್ಕೆ ಖರ್ಜೂರ ಬೆಳೆಯುವುದಿಲ್ಲ. ಮರುಭೂಮಿಯ ಉಷ್ಣಾಂಶಕ್ಕೆ ಮಾತ್ರ ಬೆಳೆಯುತ್ತದೆ. ಆದರೆ ಇಲ್ಲಿ ಬೆಳೆಯುವುದು ಅಚ್ಚರಿಯಾದರೂ ಇದೊಂದು ಇಲ್ಲಿನ ಲಾದಾಯಿಕ ಕೃಷಿಯಾಗುವುದಿಲ್ಲ. ಉದ್ಯಾನವನದಲ್ಲಿ ಅಂದಕ್ಕಾಗಿ ಇದನ್ನು ಬೆಳೆಸುತ್ತಾರೆ. ಆದರೆ ಖರ್ಜೂರ ಪಸಲು ಬರುವುದು ಕಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News