ವಿಮಾನದಲ್ಲಿ ಬಾಲಕಿಗೆ ಕಿರುಕುಳ: ಗುಜರಾತ್ ಬಿಜೆಪಿ ಮುಖಂಡ ಬಂಧನ
ಅಹ್ಮದಾಬಾದ್, ಮೇ 31: ಗೋವಾದಿಂದ ಅಹ್ಮದಾಬಾದ್‌ಗೆ ಕಳೆದ ಶುಕ್ರವಾರ ವಿಮಾನದಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕಿಗೆ ದೈಹಿಕ ಕಿರುಕುಳ ನೀಡಿದ್ದಾಗಿ, ಸ್ಥಳೀಯ ಬಿಜೆಪಿ ಮುಖಂಡನೊಬ್ಬನ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಅಶೋಕ್ ಮಕ್ವಾನ (41) ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಗುಜರಾತ್‌ನ ಆಡಳಿತಾರೂಢ ಬಿಜೆಪಿಯ ಗಾಂಧಿನಗರ ಘಟಕದ ಉಪಾಧ್ಯಕ್ಷನಾಗಿ ಆತ ಕಾರ್ಯ ನಿರ್ವಹಿಸುತ್ತಿದ್ದ.
ಆತನನ್ನು ಮಂಗಳವಾರ ಬೆಳಗ್ಗೆ ಬಂಧಿಸಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (ಪೋಸ್ಕೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಿಮಾನದಲ್ಲಿ ಬಾಲಕಿ ಕುಳಿತಿದ್ದ ಪಕ್ಕದ ಆಸನದಲ್ಲಿ ಕುಳಿತಿದ್ದ ಈ ವ್ಯಕ್ತಿ ದೈಹಿಕ ಚೇಷ್ಠೆ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ಆಪಾದಿಸಿದ್ದಾರೆ. ಏರ್‌ಲೈನ್ಸ್‌ನಿಂದ ಈ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಬಾಲಕಿಯ ಪಕ್ಕದ ಆಸನವನ್ನು ಮಕ್ವಾನಾ ಅವರ ಸ್ನೇಹಿತನ ಹೆಸರಿನಲ್ಲಿ ಕಾಯ್ದಿರಿಸಲಾಗಿತ್ತು. ವಿಮಾನ ಏರಿದ ಬಳಿಕ ಇಬ್ಬರೂ ಆಸನ ವಿನಿಮಯ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.