ಯುವಕನ ಮೇಲೆ ತಂಡದಿಂದ ಹಲ್ಲೆ: ಆರೋಪ
ಮಂಗಳೂರು, ಮೇ 31: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಕಣ್ಣೂರು ಕುಂಡಾಲ ನಿವಾಸಿ ಮುಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ ಈತ ಮನೆಯ ಕಡೆಗೆ ತೆರಳುತ್ತಿದ್ದ ಸಂದರ್ಭ ಕಣ್ಣೂರು ವೃತ್ತದಲ್ಲಿ ಸ್ನೇಹಿತನೋರ್ವನ ಮೇಲೆ ತಂಡವೊಂದು ಹಲ್ಲೆಗೆ ಮುಂದಾಗಿದ್ದುದನ್ನು ಪ್ರಶ್ನಿಸಿದ್ದ. ಈ ವಿಷಯದಲ್ಲಿ ಇರ್ಷಾದ್ ಹಾಗೂ ತಂಡದೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಷಯದಲ್ಲಿ ತಂಡದ ಸದಸ್ಯರು ರಾತ್ರಿ ಹೊತ್ತಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ತನ್ನನ್ನು ಕಣ್ಣೂರು ವೃತ್ತದಲ್ಲಿ ಬಸ್ಸಿನಿಂದ ಎಳೆದು ರಾಡ್, ಪಂಚ್ ಹಾಗೂ ಚೈನ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಇರ್ಷಾದ್ ಆರೋಪ ಮಾಡಿದ್ದಾರೆ.
ಮರಳು ಮಾಫಿಯಾಕ್ಕೆ ಸಂಬಂಧಿಸಿದ ತಂಡವೊಂದು ಈ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಫಾರೂಕ್, ಮುತಾಲಿಕ್, ಪುತ್ತ, ಬಶೀರ್ ಮತ್ತಿತರ ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಇರ್ಷಾದ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಇರ್ಷಾದ್ ಆರೋಪಿಸಿದ್ದಾರೆ.
...