×
Ad

ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ: 11 ದ್ವಿಚಕ್ರ ವಾಹನಗಳು ವಶಕ್ಕೆ

Update: 2016-06-01 14:51 IST

ಮಂಗಳೂರು, ಜೂ.1: ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಇತರ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಂಡವೊಂದನ್ನು ದಸ್ತಗಿರಿ ಮಾಡಿರುವ ದ.ಕ. ಜಿಲ್ಲಾ ಪೊಲೀಸರು ಜಿಲ್ಲೆಯ ವಿವಿಧ ಕಡೆಗಳಿಂದ ಕಳವಾಗಿರುವ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬರಾವ್ ಬೊರಸೆಯವರು ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಂಧಿತರನ್ನು ಪುತ್ತೂರಿನ ಮನ್ಸೂರ್, ಶಬೀರ್, ತೌಫೀಕ್, ಬೆಳ್ತಂಗಡಿಯ ಮಜೀದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ವಿಟ್ಲ, ಮಡಿಕೇರಿ ನಗರ ಠಾಣಾ, ಗ್ರಾಮಾಂತರ ಠಾಣಾ, ಸುಳ್ಯ, ಬೆಳ್ತಂಡಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಗಳಲ್ಲಿ ಕಳವಾದ ಕಳವಾದ ಸುಮಾರು 7.50 ಲಕ್ಷ ರೂ. ವೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ವಿಟ್ಲದ ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟು ಎಂಬಲ್ಲಿ ಯಮಹಾ ಆರ್‌ಎಕ್ಸ್ 100 ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಮೇ 26 ರಂದು ದೂರು ದಾಖಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪಿಎಸ್‌ಐ ಪ್ರಕಾಶ್ ದೇವಾಡಿಗ ಮತುತ ಅವರ ವಿಶೇಷ ತಂಡ ಮೇ 31ರಂದು ಸಂಜೆ 6 ಗಂಟೆಗೆ ಉಕ್ಕುಡದಲ್ಲಿ ವಾಹನ ತಪಾಸಣೆಯ ಸಂದರ್ಭ ಯಮಹಾ ಆರ್ ಎಕ್ಸ್ 100 ವಾಹನವನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ವ್ಯಕ್ತಿಗಳಿಬ್ಬರು ಗಾಡಿ ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಲೆತ್ನಿಸಿದ. ಪೆರ್ಲದ ಕಡೆಗೆ ಸಾಗುತ್ತಿದ್ದ ಬೈಕನ್ನು ನಿಲ್ಲಿಸಿದ್ದಾಗ ಅದರಲ್ಲಿದ್ದವರು ಓಡಲು ಯತ್ನಿಸಿದರು. ಅವರನ್ನು ಹಿಡಿದು ವಿಚಾರಿಸಿದಾಗ ತಾವು ಸವಾರಿ ಮಾಡಿಕೊಂಡು ಬಂದಿದ್ದ ಬೈಕ್ ಕುಕ್ಕರಬೆಟ್ಟು ಎಂಬಲ್ಲಿ ಕಳವು ಮಾಡಿದ್ದೆಂದು ಅದರ ನಂಬರ್ ಪ್ಲೇಟ್ ತೆಗೆದು ಕೇರಳ ಕಡೆಗೆ ಮಾರಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ಆ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಹಚರರಾ ತೌಫೀಕ್ ಮತ್ತು ಮಜೀದ್‌ರೊಂದಿಗೆ ಪುತ್ತೂರು ನಗರ, ಸುಳ್ಯ, ಬೆಳ್ತಂಗಡಿ, ಮಡಿಕೇರಿ ಕಡೆಗಳಲ್ಲಿ ಹಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದರು.

ಕಳವು ಮಾಡಿದ್ದರಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕಂಬಳಬೆಟ್ಟು ಪರಿಸರದ ಮನೆಯೊಂದರಲ್ಲಿ ಅಡಿಗಿಸಿಟ್ಟಿದ್ದು, ಉಳಿದ 5 ದ್ವಿಚಕ್ರ ವಾಹನಗಳನ್ನು ಕಾಸರಗೋಡು ಬಸ್‌ನಿಲ್ದಾಣದ ಬಿಗ್ ಬಜಾರ್ ಹಿಂಬದಿ ಇರಿಸಿರುವುದಾಗಿ ಹೇಳಿದ್ದರು. ವಿಟ್ಲ ಠಾಣಾ ಸಿಬ್ಬಂದಿಗಳೊಂದಿಗೆ ಕಳವುಗೈಯ್ಯಲಾಗಿದ್ದ ಒಟ್ಟು 11 ವಾಹನಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ವಿಟ್ಲ ಪಿಎಸ್‌ಐ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪ್ರಕರಣವನ್ನು ಬೇಧಿಸಲಾಗಿದ್ದು, ತಂಡಕ್ಕೆ 10 ಸಾವಿರ ರೂ. ನಗದು ಮಂಜೂರು ಮಾಡಲಾಗುವುದು ಎಂದು ಎಸ್ಪಿ ಭೂಷಣ್ ಗುಲಾಬರಾವ್ ಬೊರಸೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News