×
Ad

ಬಂಟ್ವಾಳ: ಅಂತರ್ಜಾಲ ಸಂಪರ್ಕವಿಲ್ಲದೆ ಉಪ ನೋಂದಣಿ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ

Update: 2016-06-01 17:33 IST

ಬಂಟ್ವಾಳ, ಜೂ. 1: ಬಿ.ಸಿ.ರೋಡ್ ಉಪನೋಂದಣಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಅಂತರ್ಜಾಲ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ನೋಂದಣಿ ಕೆಲಸ ನಡೆಯದೆ ಸಾರ್ವಜನಿಕರು ಪರದಾಡುವಂತಾಯಿತು.

ಇಲ್ಲಿನ ಉಪ ನೋಂದಣಿ ಕಚೇರಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಕೆಎಸ್‌ಒನ್ ಎಂಬ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ಕಚೇರಿಯ ಕಂಪ್ಯೂಟರ್‌ಗಳಿಗೆ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನೋಂದಣಿ ಕೆಲಸಕ್ಕೆ ತೊಡಕುಂಟಾಯಿತು. ನೋಂದಣಿ ಕೆಲಸಕ್ಕೆಂದು ಬಂದ ಸಾರ್ವಜನಿಕರು ತನ್ನ ಕೆಲಸ ನಡೆಯದ ಕಾರಣ ತೊಂದರೆ ಅನುವಿಸಿದರು. ಕಚೇರಿಯ ಹೊರ ಭಾಗದಲ್ಲಿ ಕೂತು ಕಾಲ ಕಳೆದರು.

ಸಾರ್ವಜನಿಕರ ದೂರಿನ ಮೇರೆಗೆ ಉಪನೋಂದಣಿ ಕಚೇರಿಗೆ ಭೇಟಿ ನೀಡಿದ ಪತ್ರಕರ್ತರೊಂದಿಗೆ ಮಾತನಾಡಿದ ಕಚೇರಿಯ ಅಧಿಕಾರಿಯೊಬ್ಬರು, ವಿವಿಧ ನೋಂದಣಿ ಕೆಲಸ ಮಾಡಬೇಕಾದರೆ ಅಂತರ್ಜಾಲ ಅತ್ಯಗತ್ಯವಾಗಿದೆ. ಆದರೆ ಇಂದು ಬೆಳಗ್ಗೆಯಿಂದ ಅಂತರ್ಜಾಲ ಸಂಪರ್ಕ ಕಡಿತಗೊಂಡಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಅಡ್ಡಿಯಾಗಿದೆ. ಅಂತರ್ಜಾಲ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಕೆಎಸ್‌ಒನ್ ಸಂಸ್ಥೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ಜನರೇಟರ್‌ಗೆ ಹಾಕಲು ಡೀಸೆಲ್ ಇಲ್ಲದಿರುವುದರಿಂದ ಸರ್ವರ್ ಆಫ್ ಆಗಿದ್ದು ಹಾಗಾಗಿ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ. ಆದಷ್ಟು ಬೇಗ ಜನರೇಟರ್‌ಗೆ ಡೀಸೆಲ್ ತುಂಬಿಸಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ ಎಂದರು.

ನೋಂದಣಿ ಕಚೇರಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದ್ದು, ಜಿಲ್ಲಾಡಳಿತದ ಪರವಾಗಿ ತಾಲೂಕು ಮಟ್ಟದಲ್ಲಿ ಆಯಾಯ ತಾಲೂಕಿನ ತಹಶೀಲ್ದಾರರು ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಂತರ್ಜಾಲ ಸಂಪರ್ಕ ಕಲ್ಪಿಸುವ ಕೆಎಸ್‌ಒನ್ ಸಂಸ್ಥೆಗೆ ಸಂದಾಯವಾಗಬೇಕಿದ್ದ ಹಣ ತುಂಬಾ ಸಮಯದಿಂದ ಬಾಕಿ ಇರುವುದರಿಂದ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‌ಒನ್ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಎಂದು ಉಪ ನೋಂದಾಣಿ ಕಚೇರಿಯ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.

ಉಪ ನೋಂದಣಿ ಕಚೇರಿಯಲ್ಲಿ ಪ್ರತಿ ದಿನ ಸುಮಾರು 40ರಷ್ಟು ನೋಂದಣಿಗಳು ನಡೆಯುತ್ತದೆ. ಆದರೆ ಅಧಿಕಾರಿಗಳು ಹಾಗೂ ಅಂತರ್ಜಾಲ ಸಂಸ್ಥೆಯವರ ಹಗ್ಗಜಗ್ಗಾಟದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ನಡೆಯದೆ ಪರದಾಡಿದರು. ನೋಂದಾವಣೆಗೆಂದು ಬೆಳಗ್ಗೆ ಉಪ ನೋಂದಣಿ ಕಚೇರಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ನಡೆಯದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ವಾಪಸಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News