ಸಾಮೂಹಿಕ ಪ್ರಯತ್ನದಿಂದ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ಸಾಧ್ಯ: ಡಾ.ಎಂ.ವಿಜಯಕುಮಾರ್
ಮಂಗಳೂರು, ಜೂ.1: ಸಂಶೋಧನಾ ಕ್ಷೇತ್ರದಲ್ಲಿ ಸಾಮೂಹಿಕ ಪ್ರಯತ್ನದಿಂದ ಇನ್ನಷ್ಟು ಬೆಳವಣಿಗೆ ಸಾಧಿಸಲು ಸಾಧ್ಯ ಎಂದು ಯೆನೆಪೊಯ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯಕುಮಾರ್ ತಿಳಿಸಿದ್ದಾರೆ.
ಯೆನೆಪೊಯ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಸೆಂಟರ್ ಫಾರ್ ಸಿಸ್ಟಮ್ ಬಯಾಲಜಿ ಆ್ಯಂಡ್ ಮೊಲಿ ಕ್ಯುಲರ್ ಮೆಡಿಸಿನ್ ವಿಭಾಗದಲ್ಲಿ ನಡೆದ ವೈದ್ಯಕೀಯ ರಂಗದಲ್ಲಿ ಜಿನೋಮಿಕ್ಸ್ -ಭವಿಷ್ಯದ ಔಷಧೀಯ ನಿಖರತೆಯ ಪಾತ್ರ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ಕೆಲವು ದಶಕಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯಿಂದ ಸಂಶೋಧನಾ ರಂಗದಲ್ಲೂ ಸಾಕಷ್ಟು ಬದಲಾವಣೆಗಳಾಗಿದೆ. ಯುವ ಸಂಶೋಧಕರಿಗೆ ಸಂಶೋಧನೆ ನಡೆಸಲು ಬೇಕಾಗುವ ಸಿದ್ಧ ಸಾಮಾಗ್ರಿಗಳು ಯೆನೆಪೊಯದಂತಹ ಶಿಕ್ಷಣ ಸಂಸ್ಥೆಗಳು ಒದಗಿಸುತ್ತಿವೆ. ಈ ರೀತಿಯ ಸಂಶೋಧನಾ ಸೌಲಭ್ಯಗಳನ್ನು ಉಳಿದ ಸಂಸ್ಥೆಗಳು ಬಳಸಿಕೊಂಡಾಗ ಸಂಶೋಧನಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರದೊಂದಿಗೆ ಪ್ರಗತಿ ಸಾಧ್ಯ ಎಂದು ಡಾ.ಎಂ.ವಿಜಯಕುಮಾರ್ ತಿಳಿಸಿದರು.
ಸಂಶೋಧನಾ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳ ಸಂಯೋಜನೆಯ ಮೂಲಕ ಪರಸ್ಪರ ಅನುಭವ ವಿನಿಮಯದೊಂದಿಗೆ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಸಂಶೋಧನಾ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಪ್ರತಿಫಲ ದೊರೆಯದೆ ಇರಬಹುದು. ಸಾಕಷ್ಟು ದೀರ್ಘಾವಧಿಯ ಪ್ರಯತ್ನ ಪರಿಶ್ರಮ ಬೇಕಾಗುತ್ತದೆ. ಈ ಪ್ರಕ್ರಿಯೆ ಕೆಲವೊಮ್ಮೆ ನೀರಸವಾಗಿ ಕಾಣಬಹುದು. ಸಾಕಷ್ಟು ವಿನೂತನ ಸೌಕರ್ಯಗಳು, ಸಂಶೋಧನಾ ಪೂರಕ ವಾತಾವರಣದ ಆವಶ್ಯಕತೆಗಳು ಇರುತ್ತದೆ. ಈ ನಿಟ್ಟಿನಲ್ಲಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲು ವಿಚಾರ ಸಂಕಿರಣ ಸಹಕಾರಿಯಾಗಲಿ. ಸಂಶೋಧನಾ ಚಟುವಟಿಕೆಗಳ ಮೂಲಕ ಅಂತಿಮವಾಗಿ ಜನರ ಜೀವನ ಮಟ್ಟ ಸುಧಾರಣೆಗೆ ಹಾಗೂ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿಶ್ವ ವಿದ್ಯಾನಿಲಯದ ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೊಯ ಶುಭ ಕೋರಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಬಯೋಫೊರ್ಮಾಟಿಕ್ ಸಂಸ್ಥೆಯ ನಿರ್ದೇಶಕ ಡಾ.ಟಿ.ಎಸ್.ಕೇಶವ ಪ್ರಸಾದ್ ಮಾತನಾಡುತ್ತಾ, ವಿಚಾರ ಸಂಕಿರಣ ಮೂಲಕ ಸೂಕ್ಷ್ಮಾಣು ಜೀವ ಶಾಸ್ತ್ರದ ಉಪಯೋಗಗಳು,ಕ್ಯಾನ್ಸರ್, ಪ್ರಸವ ಪೂರ್ವ ಪರೀಕ್ಷೆ ,ಅನುವಂಶಿಕ ಕಾಯಿಲೆಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ವಿ.ರಘುವೀರ್ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ.ಯಶವಂತ್ ಸುಬ್ಬನ್ನಾಯನ್ ವಂದಿಸಿದರು. ಯೆನೆಪೊಯ ವಿ.ವಿ.ಯ ಹೆಚ್ಚುವರಿ ರಿಜಿಸ್ಟ್ರಾರ್ ಡಾ.ಶ್ರೀಕುಮಾರ್ ಉಪಸ್ಥಿತರಿದ್ದರು. ಡಾ.ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.