×
Ad

ಸಿಎಂ ಕ್ಲಾಸ್ ತೆಗೆದುಕೊಳ್ಳಲು ನಾನೇನು ಮಗುವಲ್ಲ : ಶಾಸಕ ಮೊಯ್ದಿನ್ ಬಾವ

Update: 2016-06-01 19:15 IST

ಮಂಗಳೂರು, ಜೂ.1: ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ಸಹೋದರ ಬಿ.ಎಂ. ಫಾರೂಕ್ ಕುರಿತಂತೆ ಮುಖ್ಯಮಂತ್ರಿ ತನ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂಬ ಮಾಧ್ಯಮಗಳ ವರದಿ ಸುಳ್ಳು ಎಂದು ಶಾಸಕ ಮೊಯ್ದಿನ್ ಬಾವ ಸಮಜಾಯಿಷಿ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಹೋದರನ ಮೇಲೆ ಒತ್ತಡ ಹೇರಿ ನಾಮಪತ್ರ ಹಿಂತೆಗೆಯಲು ಹೇಳಬಹುದಿತ್ತು ಎಂದು ಸಿಎಂ ಹೇಳಿದರೇ ವಿನಃ, ಬೈದಿರಲಿಲ್ಲ. ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ನನಗೆ ಕ್ಲಾಸೂ ಕೊಟ್ಟಿಲ್ಲ, ಕ್ಲಾಸ್ ತೆಗೆಯಲು ನಾನೇನೂ ಮಗುವಲ್ಲ ಎಂದು ಹೇಳಿದರು.

ನನ್ನ ಸಹೋದರ ಜೆಡಿಎಸ್‌ನಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಲ್ಲಿ ನನ್ನದು ಯಾವುದೇ ಪಾತ್ರವಿಲ್ಲ ಎಂದು ಹೇಳಿದ ಅವರು, ನಾನು ಪ್ರಾಮಾಣಿಕ ಕಾಂಗ್ರೆಸಿಗನಾಗಿದ್ದು, ಕಾಂಗ್ರೆಸಿನ ಅಧಿಕೃತ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದರು. ನನಗೆ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಹಲವು ಮಂದಿ ಆಪ್ತ ಶಾಸಕರಿದ್ದರೂ ತಮ್ಮನಿಗೆ ಮತ ಹಾಕಲು ಯಾರಿಗೂ ಹೇಳಿಲ್ಲ. ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ಸಾಬೀತುಪಡಿಸಿದಲ್ಲಿ ರಾಜಕೀಯದಿಂದ ನಿವೃತ್ತನಾಗಲು ಸಿದ್ಧ. ಆಸ್ಕರ್ ರ್ನಾಂಡಿಸ್ ನನ್ನ ರಾಜಕೀಯ ಗುರು. ಅವರ ವಿರುದ್ಧ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ನನಗೂ ಸಹೋದರನಿಗೂ ಕೌಟುಂಬಿಕ ಸಂಬಂಧ ಬಿಟ್ಟರೆ ವ್ಯವಹಾರ ಹಾಗೂ ರಾಜಕೀಯದಲ್ಲಿ ಯಾವುದೇ ಸಂಬಂಧವಿಲ್ಲ. ಕಳೆದ ಬುಧವಾರ ಬೆಂಗಳೂರಿನಲ್ಲಿ ಸಿಕ್ಕಿದ ಸಹೋದರ, ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಲು ನನಗೆ ಅವಕಾಶ ನೀಡಿದ್ದಾರೆ. ಸಂಸದನಾಗುವ ಅವಕಾಶವಿದೆ ಎಂದು ತಿಳಿಸಿದ್ದ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೆ. ಅದನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮರುದಿನ ನನ್ನನ್ನು ಕರೆಸಿ, ನಿನ್ನ ಸಹೋದರನಿಗೆ ಹೆಸರು ವಾಪಸು ಪಡೆಯಲು ಒತ್ತಡ ಹೇರುವಂತೆ ಹೇಳಿದರು. ಅವರು ಹೇಳಿದಂತೆ ತಮ್ಮನಿಗೆ ಹೇಳಿದರೂ ಆತ ತನಗೂ ಸಾರ್ವಜನಿಕ ಸೇವೆ ಮಾಡುವ ಇಚ್ಛೆ ಇದೆ. ಅದಕ್ಕೆ ಅಡ್ಡ ಬರಬೇಡಿ ಎಂದು ವಾದ ಮಂಡಿಸಿದ. ಅವನ ಸ್ವಾತಂತ್ರಕ್ಕೆ ನಾನು ಅಡ್ಡಿಪಡಿಸುವುದು ಸರಿಯಲ್ಲ ಎಂದು ಸುಮ್ಮನಾದೆ ಎಂದು ಅವರು ಹೇಳಿದರು.

ಸಹೋದರನ ಯಾವುದೇ ವ್ಯವಹಾರದಲ್ಲಿ ನಾನು ಯಾವುದೇ ಪಾಲುದಾರಿಕೆ ಹೊಂದಿಲ್ಲ. ಜೊತೆಗೆ ದೇಶದ ಬೇರೆ ಬೇರೆ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಸಹೋದರರಿಬ್ಬರು, ಅಮ್ಮ ಮಗ ಸೇರಿದಂತೆ ಮನೆಯೊಳಗಿನವರೇ ಬೇರೆ ಬೇರೆ ಪಕ್ಷದಲ್ಲಿ ಸಮಾಜಸೇವೆ ಮಾಡುತ್ತಿರುವುದನ್ನು ಗಮನಿಸಬಹುದು ಎಂದವರು ಉದಾಹರಿಸಿದರು.

ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಅರುಣ್ ಕುವೆಲ್ಲೊ, ಶ್ರೀಧರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News