×
Ad

ದೇವಸ್ಥಾನದ ಫ್ರೀಝರ್‌ನಲ್ಲಿ 40 ಹುಲಿಮರಿಗಳ ಶವ ಪತ್ತೆ

Update: 2016-06-01 20:15 IST

ಬ್ಯಾಂಕಾಕ್, ಜೂ. 1: ಥಾಯ್ಲೆಂಡ್‌ನ ಕುಪ್ರಸಿದ್ಧ ಹುಲಿ ದೇವಾಲಯದ ಶೀತಲ ಸಂಗ್ರಹಾಗಾರದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ 40 ಹುಲಿ ಮರಿಗಳ ಶವಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿ ಹುಲಿಗಳ ಕಳ್ಳಸಾಗಣೆ ನಡೆಯುತ್ತಿದೆ ಮತ್ತು ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ದೇವಾಲಯದಿಂದ ಜೀವಂತ ಹುಲಿಗಳನ್ನೂ ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬ್ಯಾಂಕಾಕ್‌ನ ಕಾಂಚನಾಬುರಿ ಪ್ರಾಂತದಲ್ಲಿರುವ ಬೌದ್ಧ ದೇವಾಲಯವು ಪ್ರವಾಸಿ ಆಕರ್ಷಣೆಯಾಗಿತ್ತು. ಇಲ್ಲಿ ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ಹುಲಿ ಮರಿಗಳೊಂದಿಗೆ ಪ್ರವಾಸಿಗರು ಸೆಲ್ಫಿಗಳನ್ನು ತೆಗೆಯುತ್ತಿದ್ದರು.

ಆದರೆ, ವನ್ಯಪ್ರಾಣಿಗಳ ಕಳ್ಳಸಾಗಣೆಯೊಂದಿಗೆ ಈ ದೇವಸ್ಥಾನ ಹೊಂದಿದೆಯೆನ್ನಲಾದ ನಂಟಿನ ಬಗ್ಗೆ ತನಿಖೆ ನಡೆಸಲಾಗಿತ್ತು. ಇಲ್ಲಿನ ಹುಲಿಗಳನ್ನು ಸರಕಾರದ ನಿಯಂತ್ರಣಕ್ಕೆ ತರುವ ವಿಷಯದಲ್ಲಿ 2001ರಿಂದಲೂ ಹಗ್ಗಜಗ್ಗಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಮೇಲೆ ಸೋಮವಾರ ದಾಳಿ ಆರಂಭಿಸಲಾಗಿತ್ತು.

40 ಹುಲಿ ಮರಿಗಳ ಶವಗಳು ಅಡುಗೆ ಕೋಣೆ ಪ್ರದೇಶದ ಫ್ರೀಝರ್‌ನಲ್ಲಿ ಪತ್ತೆಯಾದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಧಿಕಾರಿಗಳು ಸೋಮವಾರದಿಂದ 52 ಜೀವಂತ ಹುಲಿಗಳನ್ನು ದೇವಸ್ಥಾನದಿಂದ ಹೊರಗೆ ಸಾಗಿಸಿದ್ದಾರೆ. ಇನ್ನೂ 85 ಹುಲಿಗಳು ಈಗಲೂ ಅಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News