ಬಂಟ್ವಾಳ ಪುರಸಭೆ ಅಧಿಕಾರಿಗಳೊಂದಿಗೆ ಎಸಿ ತುರ್ತು ಸಭೆ
ಬಂಟ್ವಾಳ, ಮೇ 1: ಪುರಸಬಾ ವ್ಯಾಪ್ತಿಯ ಮನೆಮನೆ ಕಸ ಸಂಗ್ರಹ ವ್ಯವಸ್ಥೆಯನ್ನು ಸರಿಪಡಿಸಬೇಕು, ರಸ್ತೆಬದಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು, ಘನತ್ಯಾಜ್ಯ ವಿಲೇವಾರಿಯ ಗುತ್ತಿಗೆದಾರನ ಕಾರ್ಯ ವೈಖರಿಯ ಬಗ್ಗೆ ನಿಗಾ ಇಡಬೇಕು ಎಂದು ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಪುರಸಬಾ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
ಪುರಸಬಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಅಸಮರ್ಪಕತೆಯ ಬಗ್ಗೆ ಪುರಸಬಾ ಸದಸ್ಯರೆಲ್ಲರೂ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಎಮ್ಮೆಕೆರೆ ಸಲಾಂಗೆ ಪುರಸಭೆ 15 ದಿನಗಳ ಒಳಗಾಗಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿತ್ತು. ಇದರ ಬೆನ್ನಲ್ಲೆ ಬುಧವಾರ ಸಂಜೆ ಸಹಾಯಕ ಆಯುಕ್ತ ಡಾ. ಅಶೋಕ್ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರ ಸೂಚನೆಯ ಮೇರೆಗೆ ಬಂಟ್ವಾಳ ಪುರಸಭೆಗೆ ಗುತ್ತಿಗೆದಾರನನ್ನು ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಸಿದರು.
ಸಿಸಿ ಕ್ಯಾಮರ ಅಳವಡಿಕೆಗೆ ಸೂಚನೆ
ಪುರಸಬಾ ವ್ಯಾಪ್ತಿಯ ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಸೇರಿದಂತೆ ಬಿ.ಸಿ.ರೋಡಿನ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ಪ್ರತಿನಿತ್ಯ ಕಸದ ರಾಶಿ ಬೀಳುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಸ ಎಸೆಯುವರ ಪತ್ತೆಹೆಚ್ಚಿ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಸಿಸಿಕ್ಯಾಮರಾ ಅಳವಡಿಸುವಂತೆ ಮುಖ್ಯಾಧಿಕಾರಿ ಸುಧಾಕರ್‌ರಿಗೆ ಡಾ. ಅಶೋಕ್ ಸೂಚಿಸಿದರು. ತಪ್ಪಿತಸ್ಥರಿಗೆ ದಂಡ ವಿಧಿಸಿ ಕ್ರಮ ಕೈಗೊಂಡಾಗ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಸೆಪ್ಟಂಬರ್‌ನಲ್ಲಿ ಕಾರ್ಯಾರಂಭ
ಇದೇ ಸಂದರ್ದಲ್ಲಿ ಪತ್ರಕರ್ತರಿಂದ ಸಲಹೆಯನ್ನು ಪಡೆದ ಡಾ. ಅಶೋಕ್, ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕವು ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕಾರ್ಯಾರಂಭಿಸಲಿದೆ ಎಂದರು. ಎಲ್ಲಾ ಅಡೆತಡೆಗಳು ನಿವಾರಣೆಗೊಂಡಿದ್ದು ಕಾಮಗಾರಿ ಮತ್ತೆ ಆರಂಭಿಸಲಾಗಿದ್ದು ಪ್ರಗತಿಯಲ್ಲಿದೆ ಎಂದರು. ನೆಲ ಸಮತಟ್ಟು, ಕದಂಬ ಗಿಡಗಳ ನಾಟಿ, ವರ್ಮಿ ಕಾಂಪೋಸ್ಟ್ ತಯಾರಿಯ ಕಾಮಗಾರಿ ನಡೆಯುತ್ತಿದೆ ಎಂದು ಪುರಸಬಾ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಈ ಸಂದರ್ಭದಲ್ಲಿ ಪೂರಕ ಮಾಹಿತಿ ನೀಡಿದರು.
ಕಾರ್ಮಿಕರಿಗೆ ಸುರಕ್ಷ ಕವಚ
ಪುರಸಬಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಎಲ್ಲ ಸೌಲ್ಯಗಳನ್ನು ಒದಗಿಸಲು ಗುತ್ತಿಗೆದಾರನಿಗೆ ಸೂಚಿಸುವಂತೆ ಡಾ. ಅಶೋಕ್ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಮನೆಮನೆ ಕಸ ಸಂಗ್ರಹ ನಡೆಯುತ್ತಿದೆಯೇ ಎನ್ನುವ ಬಗ್ಗೆ ಅಧಿಕಾರಿಗಳು ನಿಗಾ ಇಡಬೇಕು. ಬಿ.ಸಿ.ರೋಡಿನ ಮುಖ್ಯವೃತ್ತದಲ್ಲಿರುವ ಫಾಸ್ಟ್‌ಪುಡ್ ಹಾಗೂ ಮೀನು ಮಾರ್ಕೆಟ್‌ನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸುವಂತೆ ಸಲಹೆ ನೀಡಿದರು.
ಕಸ್ಬಾ ಗ್ರಾಮದ ಕುದನೆ ಗುಡ್ಡೆ ಎಂಬಲ್ಲಿ ವಸಂತಿ ಎಂಬವರ ಖಾಸಗಿ ಜಮೀನಿನಲ್ಲಿ ಲೋಕಸಬಾ ಚುನಾವಣಾ ಸಂದರ್ಭ ಕೊಳವೆ ಬಾವಿ ಕೊರೆದ ಪ್ರಕರಣದ ಬಗ್ಗೆಯೂ ಡಾ. ಅಶೋಕ್ ಮುಖ್ಯಧಿಕಾರಿ ಹಾಗೂ ಇಂಜಿನಿಯರಿಂದ ಮಾಹಿತಿ ಪಡೆದುಕೊಂಡರು. ಚುನಾವಣಾ ಆಯೋಗ ಈ ಪ್ರಕರಣ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಆದೇಶಿ ಹೊರಡಿಸಿರುವುದನ್ನು ಕೂಡ ಡಾ. ಅಶೋಕ್‌ರವರ ಗಮನಕ್ಕೆ ತರಲಾಯಿತು.
ಜಟಾಪಟಿ
ಸಬೆ ಆರಂಭಕ್ಕೆ ಮುನ್ನ ಕಸ ವಿಲೇವಾರಿ ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಹಾಗೂ ಪುರಸಭಾ ಸದಸ್ಯ ಮುಹಮ್ಮದ್ ಶರೀಫ್ ನಡುವೆ ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ಕೊನೆಗೆ ಸಹಾಯಕ ಕಮಿಷನರ್ ಅಶೋಕ್ ಗುತ್ತಿಗೆದಾರ ಎಮ್ಮೆಕೆರೆ ಸಲಾಂರನ್ನು ಸಭೆಯಿಂದ ಹೊರ ಕಳುಹಿಸಿ ಅಧಿಕಾರಿಗಳೊಂದಿಗೆ ಸಭೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪುರಸಬಾಧ್ಯಕ್ಷ ರಾಮಕೃಷ್ಣ ಆಳ್ವ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಅಧಿಕಾರಿಗಳಾದ ರಝಾಕ್, ಮತ್ತಡಿ, ಚೆನ್ನಪ್ಪಗೌಡ ಹಾಜರಿದ್ದರು.