ಅಂತಾರಾಜ್ಯ ದ್ವಿಚಕ್ರ ವಾಹನ ಕಳವು ಜಾಲವನ್ನು ಬೇಧಿಸಿದ ವಿಟ್ಲ ಪೊಲೀಸರು
ವಿಟ್ಲ, ಜೂ. 1: ಅಂತಾರಾಜ್ಯ ದ್ವಿಚಕ್ರ ವಾಹನ ಕಳವು ಜಾಲವನ್ನು ಬೇಧಿಸಿದ ವಿಟ್ಲ ಪೊಲೀಸರ ತಂಡ ನಾಲ್ವರು ಆರೋಪಿಗಳ ಸಹಿತ 11 ಬೈಕ್‌ಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಬಂಧಿತ ಚೋರರನ್ನು ಪುತ್ತೂರು ಕಸಬಾ ಗ್ರಾಮದ ಸುಸ್ರುತ ಆಸ್ಪತ್ರೆ ಸಮೀಪದ ನಿವಾಸಿ ಅಬ್ದುಲ್ ಮಜೀದ್ ಎಂಬವರ ಪುತ್ರ ಮನ್ಸೂರ್ (19), ಪುತ್ತೂರು ತಾಲೂಕಿನ ಪರ್ಲಡ್ಕ-ಗೋಳಿಕಟ್ಟೆ ನಿವಾಸಿ ಯೂಸುಪ್ ಎಂಬವರ ಪುತ್ರ ಶಬೀರ್ (19), ಕಬಕ ಗ್ರಾಮದ ಪೊಲ್ಯ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ತೌಫಿಕ್ (22) ಹಾಗೂ ಬೆಳ್ತಂಗಡಿ ತಾಲೂಕಿನ ಎರ್ಮಾಲ್‌ಪಲ್ಕೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಮಜೀದ್ (25) ಎಂದು ಹೆಸರಿಸಲಾಗಿದೆ.
ಜಾಲ ಬೇಧಿಸಿದ್ದರಿಂದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಮಹಾ ಆರ್‌ಎಕ್ಸ್-100, ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹೋಂಡಾ ಡಿಯೋ ಸ್ಕೂಟರ್, ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಹೋಂಡಾ ಡಿಯೋ ಸ್ಕೂಟರ್, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಯಮಹಾ ಎಫ್‌ಝಡ್, ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಮೂರು ಹೋಂಡಾ ಡಿಯೋ ಸ್ಕೂಟರ್ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಮೂರು ಯಮಹಾ ಎಫ್‌ಝಡ್ ಬೈಕ್‌ಗಳ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಸಂಜೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ವಿಟ್ಲ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೆರ್ಲ ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಆರ್‌ಎಕ್ಸ್-100 ಬೈಕನ್ನು ತಡೆದು ನಿಲ್ಲಿಸಿದಾಗ ಸವಾರ ಮನ್ಸೂರ್ ಹಾಗೂ ಸಹ ಸವಾರ ಶಬೀರ್ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ಇದರಿಂದ ಸಹಜವಾಗಿಯೇ ಸಂಶಯಗೊಂಡ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಸಮರ್ಪಕ ದಾಖಲೆಗಳು ಇರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಇದು ವಿಟ್ಲ ಠಾಣಾ ವ್ಯಾಪ್ತಿಯ ಕುಕ್ಕರೆಬೆಟ್ಟು ಎಂಬಲ್ಲಿಂದ ಕಳವು ಮಾಡಿದ ಬೈಕ್ ಎಂದು ಪೊಲೀಸರಿಗೆ ಗೊತ್ತಾಗಿದೆ.
ಕಳವುಗೈದ ಬೈಕನ್ನು ಕೇರಳಕ್ಕೆ ಮಾರಾಟ ಮಾಡಲು ಕೊಂಡುಹೋಗುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಂಧಿತ ಇಬ್ಬರು ಆರೋಪಿಗಳು ನೀಡಿದ ಮಾಹಿತಿಯಂತೆ ಇನ್ನಿಬ್ಬರು ಆರೋಪಿಗಳಾದ ತೌಫಿಕ್ ಹಾಗೂ ಮಜೀದ್ ಎಂಬರಿಗೂ ಬಲೆ ಬೀಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳು ಪುತ್ತೂರು ನಗರ, ಸುಳ್ಯ, ಬೆಳ್ತಂಗಡಿ, ಮಡಿಕೇರಿ ಮೊದಲಾದೆಡೆಗಳಲ್ಲಿ ಹಲವು ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯೂ ಲಭ್ಯವಾಗಿದೆ.
ತಾವು ಕಳವು ವಾಡಿದ ಐದು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಕಂಬಳಬೆಟ್ಟು ಪರಿಸರದ ಪಾಳು ಬಿದ್ದ ಮನೆಯೊಂದರಲ್ಲಿ ಅಡಗಿಸಿಟ್ಟಿರುವುದಾಗಿ ಹಾಗೂ ಉಳಿದ 5 ದ್ವಿಚಕ್ರ ವಾಹನಗಳನ್ನು ಕಾಸರಗೋಡು ಬಸ್ ನಿಲ್ದಾಣದ ಬಳಿಯ ಬಿಗ್ ಬಜಾರ್ ಹಿಂಬದಿಯಲ್ಲಿ ಇಟ್ಟಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದು, ಇದೆಲ್ಲವನ್ನೂ ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಎಸ್ಪಿ ಡಾ.ಭೂಷಣ್ ಜಿ ಬೊರಸೆ, ಅಡಿಶನಲ್ ಎಸ್ಪಿಡಾ.ವೇದಮೂರ್ತಿ, ಬಂಟ್ವಾಳ ಡಿವೈಎಸ್‌ಪಿ ಭಾಸ್ಕರ್ ರೈ ಮಾರ್ಗದರ್ಶನದಂತೆ ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪನೇತೃತ್ವದಲ್ಲಿ ವಿಟ್ಲ ಎಸೈ ಪ್ರಕಾಶ್ ದೇವಾಡಿಗ, ಎಎಸೈ ಜಿ. ರುಕ್ಮಯ ಮೂಲ್ಯ, ಸಿಬ್ಬಂದಿಯಾದ ಜಿನ್ನಪ್ಪ ಗೌಡ, ಜಯಕುಮಾರ್, ರಾಮಚಂದ್ರ, ಪ್ರವೀಣ್ ರೈ, ರಕ್ಷಿತ್ ರೈ, ರಮೇಶ್, ವಿತ್ ರೈ, ಪ್ರವೀಣ್ ಕುಮಾರ್, ಲೋಕೇಶ್, ಸತೀಶ್, ಶ್ರೀಧರ್, ಗೀತಾ, ಪ್ರಮೀಳಾ, ಹಾಗೂ ಚಾಲಕ ರಘುರಾಮ, ಯೋಗೀಶ್, ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್, ದಿವಾಕರ್ ಬೃಹತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ತಂಡಕ್ಕೆ ಬಹುಮಾನ
ಜಿಲ್ಲಾ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಟ್ಲ ಠಾಣೆಗೆ ಪ್ರಥಮ ಬಾರಿಗೆ ಆಗಮಿಸಿದ ಡಾ.ಭೂಷಣ್ ಜಿ ಬೊರಸೆ ಮಾತನಾಡಿ, ವಿಟ್ಲ ಪೊಲೀಸರ ಈ ಬೃಹತ್ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು, ನನ್ನ ಕಾರ್ಯಾವಧಿಯ ಆರಂಭದಲ್ಲೇ ನಮ್ಮ ಪೊಲೀಸ್ ತಂಡ ದೊಡ್ಡಮಟ್ಟದ ವಾಹನ ಕಳವು ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವುದು ಸಂತಸ ತಂದಿದೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು.
ಕನ್ಯಾನದಲ್ಲಿ ಪೊಲೀಸ್ ಹೊರಠಾಣೆ ಹಾಗೂ ವಿಟ್ಲ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಇದೇ ಎಸ್ಪಿ ಸುದ್ದಿಗಾರರಿಗೆ ತಿಳಿಸಿದರು.