×
Ad

ಕರಾವಳಿಯ ಮಣ್ಣಿನ ಮಕ್ಕಳಾದ ಮೊಯ್ಲಿ, ಡಿ.ವಿ.ಗೆ ಶಹಬ್ಬಾಸ್‌ಗಿರಿ ನೀಡಬೇಕು: ಜನಾರ್ಧನ ಪೂಜಾರಿ ವ್ಯಂಗ್ಯ

Update: 2016-06-01 20:52 IST

ಮಂಗಳೂರು, ಜೂ.1: ಎತ್ತಿನಹೊಳೆ ಯೋಜನೆಯನ್ನು ಹೇಗಾದರೂ ಮಾಡಿಯೇ ಸಿದ್ಧ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಮತ್ತು ಡಿ.ವಿ. ಸದಾನಂದ ಗೌಡರಿಗೆ ಶಹಬ್ಬಾಸ್‌ಗಿರಿ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ವ್ಯಂಗ್ಯವಾಡಿದ್ದಾರೆ.

ಕರಾವಳಿ ನೆಲದ ಮಣ್ಣಿನ ಮಕ್ಕಳಾದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ನೇತ್ರಾವತಿ ನದಿ ತೀರದ ಜನರಿಗೆ ಎತ್ತಿನಹೊಳೆಯಿಂದಾಗಬಹುದಾದ ನೀರಿನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದೆ ನೀಡುತ್ತಿರುವ ಹೇಳಿಕೆಗಳಾಗಿವೆ ಎಂದು ಜನಾರ್ದನ ಪೂಜಾರಿ ಟೀಕಿಸಿದರು.

ಪೊಲೀಸರ ಬೇಡಿಕೆಯನ್ನು ತಕ್ಷಣ ಪರಿಹರಿಸಿ

ಪೊಲೀಸರು ಜೂನ್ 4ರಂದು ಮುಷ್ಕರ ನಡೆಸಲು ಹೊರಟಿರುವುದನ್ನು ತಪ್ಪಿಸಲು ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು.ರಾಜ್ಯದಲ್ಲಿ ಪೊಲೀಸರು ಪಡೆಯುತ್ತಿರುವ ವೇತನ ಕೇರಳ,ಆಂಧ್ರ, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ಇದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ನ್ಯಾಯಯುತವಾದುದು. ಈ ಬಗ್ಗೆ ಸರಕಾರ ಸೂಕ್ತವಾಗಿ ಸ್ಪಂದಿಸಿ ತುರ್ತು ನಿರ್ಧಾರ ಕೈಗೊಳ್ಳಬೇಕು.

ಪೊಲೀಸ್ ಇಲಾಖೆಯ ತಳಮಟ್ಟದ ಸಿಬ್ಬಂದಿಯ ಜೊತೆ ಚರ್ಚಿಸಬೇಕಾಗಿದೆ. ಅವರು ಮುಷ್ಕರ ನಡೆಸಲು ಹೊರಟಾಗ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಹೇಳಿಕೆ ನೀಡುವ ಬದಲು ಅವರ ನ್ಯಾಯ ಬದ್ಧವಾದ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಲು ಸರಕಾರ ಮುಂದಾಗಬೇಕು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ರಾಜ್ಯಕ್ಕೆ ಮೋದಿಯ ಅಚ್ಛೇದಿನ್ ಯಾವಾಗ?

ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ದಾವಣಗೆರೆಗೆ ಬಂದ ಪ್ರಧಾನಿ ಮೋದಿ ರಾಜ್ಯವನ್ನು ಕಾಡುತ್ತಿರುವ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ.ಅನುದಾನ ನೀಡುವ ಬಗ್ಗೆಯೂ ತಿಳಿಸಿಲ್ಲ. ಕರ್ನಾಟಕದ ಬಗ್ಗೆ ಭೇದ ಏಕೆ? ಮೋದಿಯವರ ಅಚ್ಛೇದಿನ್ ಕರ್ನಾಟಕಕ್ಕೆ ಯಾವಾಗ ಬಂದೀತು ಎಂದು ಪೂಜಾರಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಚಿತ್ರಾಪುರ, ಟಿ.ಕೆ.ಸುಧೀರ್,ಅರುಣ್ ಕುವೆಲ್ಲೊ, ಉಮೇಶ್ಚಂದ್ರ, ರಮಾನಂದ ಪೂಜಾರಿ, ಕರುಣಾಕರ ಶೆಟ್ಟಿ, ಜಯಕರ ಸಮರ್ಥ, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News