×
Ad

ಉಳ್ಳಾಲ: ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

Update: 2016-06-01 21:31 IST

 ಉಳ್ಳಾಲ, ಜೂ. 1: ಉಳ್ಳಾಲ ಮಾಸ್ತಿಕಟ್ಟೆಯ ಭಾರತ್ ಫ್ರೌಢಶಾಲೆಯಲ್ಲಿ ಕಳೆದ 34 ವರುಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ವಾಸುದೇವರಾವ್‌ರಿಗೆ ಶಾಲಾಡಳಿತದ ಪರವಾಗಿ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನಡೆಯಿತು.

ಈ ಸಂದರ್ಭ ಸಭಾಧ್ಯಕ್ಷತೆಯನ್ನು ಶಾಲೆಯ ಹಳೆ ವಿದ್ಯಾರ್ಥಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಭರತ್ ಕುಮಾರ್ ವಹಿಸಿದ್ದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, ವಾಸುದೇವರಾವ್ ಕೇವಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು. ಅವರು ಶಾಲೆಗೆ ನೀಡಿದ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯಲು ಅಸಾಧ್ಯ. ಇಂತಹ ಶಿಕ್ಷಕರಿಗೆ ಸರಕಾರವು ಉತ್ತಮ ಶಿಕ್ಷಕ ಪ್ರಶಸ್ತಿ ನೀಡದ್ದು ಖೇದಕರ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಸುದೇವರಾವ್, 34 ವರುಷದ ಹಿಂದೆ ಹುಟ್ಟೂರು ತುಮಕೂರಿನಿಂದ ಕೆಲಸ ಅರಸಿ ಮಂಗಳೂರಿನ ಉಳ್ಳಾಲದ ಭಿನ್ನ ಪರಿಸರಕ್ಕೆ ಬಂದ ನನಗೆ ಉದ್ಯೋಗ ನೀಡಿದ ಶಾಲೆಯ ಆಡಳಿತ ನಡೆಸುತ್ತಿದ್ದ ಮೊಗವೀರ ಸಂಘಕ್ಕೆ ತಾನು ಎಂದಿಗೂ ಅಭಾರಿ. ಮೊಗವೀರ ಸಂಘದವರು ನನ್ನ ಬದುಕು ಮತ್ತು ವ್ಯಕ್ತಿತ್ವ ರೂಪಿಸಿದರು. ಭಾರತದಲ್ಲಿ 1950 ನೇ ಇಸವಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಅಧಿಕೃತವಾಗಿ ಜಾರಿಗೆ ಬಂದಿದ್ದರೂ, ಉಳ್ಳಾಲದ ಮೊಗವೀರ ಸಂಘದವರು ಮಾತ್ರ 1947 ರಲ್ಲೇ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಅನುಷ್ಠಾನಗೊಳಿಸಿ ದೇಶಕ್ಕೇ ಮಾದರಿಯಾಗಿದ್ದು ಇಂತಹ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದುದರ ಬಗ್ಗೆ ಅತೀವ ಹೆಮ್ಮೆ ನನಗಿದೆ ಎಂದು ಹೇಳಿದರು.

ಶಿಕ್ಷಕರಾದ ತಿಪ್ಪೇಸ್ವಾಮಿ, ಪ್ರಜ್ಞಾ, ಶೈಲಜಾ, ವಿದ್ಯಾರ್ಥಿನಿ ಅಂಜುಶ್ರೀ ವಾಸುದೇವ ರಾವ್‌ರ ಕಾರ್ಯವೈಖರಿಯ ಬಗೆಗೆ ಅನುಭವ ಹಂಚಿದರು.

ಶಾಲಾಡಳಿತ, ಸಹೋದ್ಯೋಗಿ ಬಳಗ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘದ ವತಿಯಿಂದ ವಾಸುದೇವರಾವ್‌ರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಡಲಾಯಿತು.

ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಮಧ್ಯಸ್ಥ ಗಂಗಾಧರ್ ಸುವರ್ಣ,ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕಾರ್ಯದರ್ಶಿ ಶಂಕರ್ ಬಂಗೇರ, ಜತೆ ಕಾರ್ಯದರ್ಶಿ ರಾಜೇಶ್ ಪುತ್ರನ್, ಶಾಲಾಡಳಿತ ಮಂಡಳಿ ಸಂಚಾಲಕ ತೇಜ್‌ಪಾಲ್ ಅಮೀನ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಾಗವೇಣಿ ಸ್ವಾಗತಿಸಿ, ಶಿಕ್ಷಕ ತಿಪ್ಪೇಸ್ವಾಮಿ ವಂದಿಸಿದರು. ಶಿಕ್ಷಕಿ ವಿನಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News