×
Ad

ದ.ಕ.ದಲ್ಲಿ ಕೊರಗರ ಜನಸಂಖ್ಯೆ ಕ್ಷೀಣ: ಅಧ್ಯಯನಕ್ಕೆ ಡಿಸಿ ಸೂಚನೆ

Update: 2016-06-01 23:30 IST

ಮಂಗಳೂರು, ಜೂ.1: ದ.ಕ. ಜಿಲ್ಲೆಯಲ್ಲಿ ಕೊರಗರ ಜನಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ, ಈ ಬಗ್ಗೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಲು ಸೂಚಿಸಿದ್ದಾರೆ.

ಬುಧವಾರ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ಅವರು ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರ ಜನಸಂಖ್ಯೆ 82,268 ಆಗಿದ್ದು, ಈ ಪೈಕಿ ಕೊರಗರ ಸಂಖ್ಯೆ 4,858. ಜಿಲ್ಲೆಯಲ್ಲಿ ಒಟ್ಟು 1,206 ಕೊರಗ ಕುಟುಂಬಗಳಿದ್ದು, ಈ ಪೈಕಿ 2,465ಪುರುಷರು ಹಾಗೂ 2,393 ಮಹಿಳೆಯರಿದ್ದಾರೆ ಎಂದವರು ತಿಳಿಸಿದರು.

2001ನೆ ವರ್ಷದಲ್ಲಿ ದ.ಕ. ಜಿಲ್ಲೆಯಲ್ಲಿ ಕೊರಗರ ಜನಸಂಖ್ಯೆ 6,337 ಇದ್ದು, 2011ಕ್ಕೆ ಇದು 4,858ಕ್ಕೆ ಇಳಿದಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಜಿಲ್ಲೆಗೆ ಆಗಮಿಸಿ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೊರಗರ ಜನಸಂಖ್ಯೆ ಕ್ಷೀಣಿಸಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಬೇರೆ ಪಂಗಡ, ಸಮುದಾಯಗಳಿಗೆ ಹೋಲಿಸಿದರೆ, ಕೊರಗರಲ್ಲಿ ಮಕ್ಕಳ ಸಾವಿನ ಪ್ರಮಾಣ ಸುಮಾರು 10 ಪಟ್ಟು ಹೆಚ್ಚಳವಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೊರಗರ ವಂಶವಾಹಿ ಅಧ್ಯಯನವನ್ನು ವೈಜ್ಞಾನಿಕವಾಗಿ ನಡೆಸಬೇಕಿದೆ ಎಂದು ಜಿಲ್ಲಾಕಾರಿ ವಿವರಿಸಿದರು.

ಕೊರಗ ಸಮುದಾಯದ ಜನನ-ಮರಣ ಪ್ರಮಾಣ, ಸರಾಸರಿ ಜೀವಿತಾವ, ಶಿಶು ಮರಣ ಪ್ರಮಾಣ, ರೋಗ ವಿವರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಕಳೆದ ವರ್ಷ ನಡೆದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊರಗರ ವಿವರಗಳನ್ನು ಪಡೆದು, ಅಧ್ಯಯನಕ್ಕೆ ಬಳಸಬೇಕು. ಕೊರಗ ಸಮುದಾಯದ ಕಳೆದ 30 ವರ್ಷಗಳ ಆರೋಗ್ಯ ಮಾಹಿತಿಗಳನ್ನು ಪಡೆಯಬೇಕು. ಸ್ವಂತ ಮನೆ ಇಲ್ಲದವರ ವಿವರಗಳನ್ನು ಪಡೆಯುವಂತೆ ಜಿಲ್ಲಾಕಾರಿ ಸೂಚಿಸಿದರು.

ಅಕ್ರಮ ಸಕ್ರಮ ಯೋಜನೆಯಡಿ 94ಸಿ ಹಾಗೂ 94ಸಿಸಿ ನಿಯಮದಡಿ ಕೊರಗರು ಸಲ್ಲಿಸಿರುವ ಅರ್ಜಿಗಳಿಗೆ ಮಂಜೂರಾತಿ ನೀಡಲು ಸಂಬಂಧಪಟ್ಟ ತಹಶೀಲ್ದಾರ್‌ಗಳೊಂದಿಗೆ ಚರ್ಚಿಸಬೇಕು ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಕೊರಗರ ಬಗ್ಗೆ ನಡೆಸುತ್ತಿರುವ ಅಧ್ಯಯನಕ್ಕೆ ಸರಕಾರದಿಂದ ಪ್ರಾಯೋಜಕತ್ವ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಎ.ಬಿ. ಇಬ್ರಾಹೀಂ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಕಾರಿ ಹೇಮಲತಾ, ಜಿಲ್ಲಾ ಆರೋಗ್ಯಾಕಾರಿ ಡಾ. ರಾಮಕೃಷ್ಣ ರಾವ್, ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.


ಕೊರಗರ ಆಹಾರ ಸುಧಾರಣೆಯ ವರದಿಗೆ ಸೂಚನೆ

ಕೊರಗರ ಆರೋಗ್ಯ ಸುಧಾ ರಣೆಗೆ ಜಿಲ್ಲೆಯಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತೀ ಕೊರಗ ಕುಟುಂಬಕ್ಕೆ ವರ್ಷದಲ್ಲಿ 6 ತಿಂಗಳು ಮಾಸಿಕ 2,391 ರೂ. ವೆಚ್ಚದಲ್ಲಿ ಪೌಷ್ಟಿಕ ಆಹಾರಗಳನ್ನು ಅಂಗನವಾಡಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇಂತಹ ಯೋಜನೆಗಳು ಕೊರಗರ ಆಹಾರ ಸುಧಾರಣೆಗೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ ಎಂಬುದರ ಬಗ್ಗೆ ವರದಿ ನೀಡುವಂತೆ ಅವರು ಅಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News