×
Ad

ಜುಲೈಯಿಂದ ಉಡುಪಿ ಕ್ಷೇತ್ರದಲ್ಲಿ ಜನಸಂಪರ್ಕ ಸಭೆ: ಪ್ರಮೋದ್

Update: 2016-06-01 23:31 IST

ಉಡುಪಿ, ಜೂ.1: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಮೂರು ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಗಳನ್ನು ಜುಲೈ ಮೊದಲ ವಾರದಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹಾಗೂ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ಇಂದು ನಡೆದ ಜನಸಂಪರ್ಕ ಕಾರ್ಯ ಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಕಾರಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 32 ಇಲಾಖೆಗಳಿದ್ದು, 94 ಯೋಜನೆಗಳು ಅನುಷ್ಠಾನಗೊಂಡಿವೆ. ಇವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ನೀಡಬೇಕು ಎಂದರು.

ಸಭೆಯಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಬ್ರಹ್ಮಾವರದ ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಪಂ ಕಾರ್ಯನಿರ್ವಹಣಾಕಾರಿ ಶೇಷಪ್ಪ, ನಗರಸಭಾ ಪೌರಾಯುಕ್ತ ಡಿ.ಮಂಜುನಾಥಯ್ಯ, ನಗರಾಭಿವೃದ್ಧಿ ಪ್ರಾಕಾರದ ಆಯುಕ್ತ ಜನಾರ್ದನ್ ಉಪಸ್ಥಿತರಿದ್ದರು.

ಕುಡಿಯುವ ನೀರಿಗೆ ವ್ಯವಸ್ಥೆ
ಜಿಲ್ಲೆಗೆ ಜೂ.6-7ರ ಸುಮಾರಿಗೆ ಮುಂಗಾರು ಕಾಲಿಡುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿರುವುದರಿಂದ ಅದುವರೆಗೆ ಜನರಿಗೆ ಕುಡಿಯುವ ನೀರು ನೀಡಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಅಕಾರಿಗಳು ತಿಳಿಸಿದರು.
ಬಜೆ ಅಣೆಕಟ್ಟಿನಲ್ಲಿ ಸ್ವರ್ಣಾನದಿಯ ನೀರು ಕಡಿಮೆಯಾದರೂ, ಪುತ್ತಿಗೆ ಆಸುಪಾಸಿನಲ್ಲಿ ತಗ್ಗು ಪ್ರದೇಶದಲ್ಲಿರುವ ನೀರನ್ನು ಪಂಪ್‌ಗಳ ಮೂಲಕ ಬಜೆ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಅಲ್ಲದೇ ಟ್ಯಾಂಕರ್‌ಗಳ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ನಗರಸಭಾ ಇಂಜಿನಿಯರ್‌ಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News