ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವ ಸಮಾಜ ನಿರ್ಮಿಸಿ: ನ್ಯಾ.ಸಂತೋಷ್ ಹೆಗ್ಡೆ
ಕುಂದಾಪುರ, ಜೂ.1: ಇಂದಿನ ಯುವ ಸಮು ದಾಯ ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವ ಹಾಗೂ ಪ್ರಾಮಾಣಿಕರಿಗೆ ಬೆಲೆ ಕೊಡುವ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಉಡುಪಿ ಜಿಪಂ, ಕುಂದಾಪುರ ತಾಪಂ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ಸೋಲಾರ್ ದೀಪ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅಮಾಸೆಬೈಲು ಪ್ರೌಢಶಾಲೆಯ ಆವರಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಮಾಸೆಬೈಲು ಪೇಟೆಯಲ್ಲಿ ಅಳವಡಿಸಲಾದ ಸೋಲಾರ್ ದೀಪ, ಮೀನು ಮಾರುಕಟ್ಟೆ, ಕೃಷಿ ಮಾರುಕಟ್ಟೆ, ಪ್ರೌಢಶಾಲಾ ಬಾಲಕರ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಹಾಗೂ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಯರಾಮ ಭಟ್, ಜಿಪಂ ಅಧ್ಯಕ್ಷ ದಿನಕರ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಿರಿಯಣ್ಣ, ಭಾರತೀಯ ವಿಕಾಸ ಟ್ರಸ್ಟ್‌ನ ಕೆ.ಎಂ.ಉಡುಪ ಅತಿಥಿಗಳಾಗಿದ್ದರು. ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ, ತಾಪಂ ಸದಸ್ಯ ಜ್ಯೋತಿ ಪೂಜಾರ್ತಿ, ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ, ಟಿ.ಚಂದ್ರಶೇಖರ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜೀವನಚರಿತ್ರೆಗೆ ‘ನಾನು ಯಾರು?’ ಶೀರ್ಷಿಕೆ
ಇಂದು ‘ಜನರಿಂದ ಜನರಿಗೋಸ್ಕರ ಜನರ ಸರಕಾರ’ದ ಬದಲು ‘ಕೆಲವರಿಂದ ಕೆಲವರಿಗೋಸ್ಕರ ಕೆಲವರ ಸರಕಾರ’ವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಗಳು ಅನ್ಯಾಯಗಳನ್ನು ಪ್ರಶ್ನಿಸುವ ಮತದಾರರನ್ನೇ ನೀವು ಯಾರು ಎಂದು ಪ್ರಶ್ನಿಸುವಂತಹ ಸ್ಥಿತಿ ನಮ್ಮಲ್ಲಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ದಲ್ಲಿ ನಮಗೆ ಬೆಲೆ ಇಲ್ಲದಂತಾಗಿದೆ. ಮುಂದೆ ನಾನು ನನ್ನ ಜೀವನ ಚರಿತ್ರೆಯನ್ನು ಬರೆಯ ಬೇಕೆಂದಿದ್ದೇನೆ. ಅದಕ್ಕೆ ‘ನಾನು ಯಾರು?’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದೇನೆ ಎಂದು ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದರು.
ರಾಜ್ಯದಲ್ಲೇ ಪ್ರಥಮ ಸೋಲಾರ್ ಗ್ರಾಮವನ್ನಾಗಿಸುವ ಯೋಜನೆ
ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಎಲ್ಲ ಮನೆ ಹಾಗೂ ಬೀದಿಗಳಿಗೆ ಸೋಲಾರ್ ದೀಪವನ್ನು ಅಳವಡಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸೋಲಾರ್ ಗ್ರಾಮವನ್ನಾಗಿ ಸುವ ವಿಶಿಷ್ಟ ಯೋಜನೆಯ ಅನುಷ್ಠಾನಕ್ಕೆ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ.
ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್‌ಆರ್‌ಇ)ದಿಂದ ಶೇ.30 ಮತ್ತು ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆಆರ್‌ಇಡಿಎಲ್)ಯಿಂದ ಶೇ.20 ಮತ್ತು ನಕ್ಸಲ್ ಪೀಡಿತ ಪ್ರದೇಶಾಭಿವೃದ್ಧಿ ನಿಯಿಂದ 25 ಲಕ್ಷ ರೂ. ಮತ್ತು ಲಾ ನುಭವಿಗಳ ವಂತಿಗೆಯೊಂದಿಗೆ ಈ ಯೋಜನೆಯನ್ನು ಟ್ರಸ್ಟ್ ಅನುಷ್ಠಾನಗೊಳಿಸುತ್ತಿದೆ.
ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು ಗ್ರಾಮಗಳಲ್ಲಿರುವ ಒಟ್ಟು 1,497 ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. 2 ದೀಪಗಳಿಗೆ 9,900 ರೂ., 4 ದೀಪಗಳಿಗೆ 16 ಸಾವಿರ ರೂ. ಮತ್ತು ಬೀದಿದೀಪಕ್ಕೆ 23,500 ರೂ. ವೆಚ್ಚವಾಗಲಿದ್ದು, ಲಾನುಭವಿಗಳಿಗೆ 2 ದೀಪಗಳಿಗೆ 3 ಸಾವಿರ ರೂ., 4 ದೀಪಗಳಿಗೆ 6 ಸಾವಿರ ರೂ. ಮತ್ತು ಬೀದಿದೀಪಕ್ಕೆ ಗ್ರಾಪಂ ಹಣ ನೀಡಬೇಕಾಗುತ್ತದೆ. ಅಳವಡಿಕೆಯ ನಂತರ ಐದು ವರ್ಷಗಳ ಸಂಪೂರ್ಣ ಗ್ಯಾರಂಟಿಯೊಂದಿಗೆ ನಿರ್ವಹಣೆ ಮಾಡಲಾಗುತ್ತದೆ.
ಒಟ್ಟು 2,08,33,500 ರೂ. ವೆಚ್ಚದ ಈ ಯೋಜನೆಗೆ ಎಂಎನ್‌ಆರ್‌ಇಯಿಂದ 62,50,050 ರೂ., ಕೆಆರ್‌ಇಡಿಎಲ್‌ನಿಂದ 41,66,700 ರೂ., ಜಿಲ್ಲಾಡಳಿತದಿಂದ 25 ಲಕ್ಷ ರೂ. ಸೇರಿದಂತೆ ಒಟ್ಟು 1,29,16,750 ರೂ. ದೊರೆತಿದೆ. ಲಾನುಭವಿಗಳ ವಂತಿಗೆ 70,89,000 ರೂ., ಇತರ ಮೂಲಗಳಿಂದ 2 ಲಕ್ಷರೂ., ಕಿರುಸಾಲ ಯೋಜನೆಯಿಂದ 6,27,756 ರೂ. ಸಂಗ್ರಹಿಸಲಾಗುತ್ತಿದೆ ಎಂದು ಸೆಲ್ಕೋ ಸೋಲಾರ್ ಲೈಟ್‌ನ ಸಹಾಯಕ ಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಮಾತನಾಡಿ, ಈ ಯೋಜನೆಯ ಅನುಷ್ಠಾನದಿಂದಾಗಿ ಪ್ರತಿ ಮನೆಯಲ್ಲೂ ಬೆಳಕು ಹಾಗೂ ವಿದ್ಯುತ್ ಬಿಲ್ ದರವನ್ನು ಉಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಸರಕಾರಕ್ಕೂ ಕೂಡ ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಎಂದು ತಿಳಿಸಿದರು.