ಗೋವಾದ ಜನರನ್ನು ಅಸಮಾಧಾನಗೊಳಿಸಿರುವ ನೈಜೀರಿಯಾ ಪ್ರಜೆಗಳ ವರ್ತನೆ: ಮುಖ್ಯಮಂತ್ರಿ
ಪಣಜಿ,ಜೂ.1: ರಾಜ್ಯದಲ್ಲಿ ವಾಸವಾಗಿರುವ ನೈಜೀರಿಯಾ ಪ್ರಜೆಗಳ ವರ್ತನೆ, ಮನೋಭಾವ ಮತ್ತು ಜೀವನ ಶೈಲಿ ಗೋವಾದ ಜನರಲ್ಲಿ ಅಸಮಾಧಾನವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಲಕ್ಮೀಕಾಂತ್ ಪಾರ್ಸೇಕರ್ ಅವರು ಹೇಳಿದ್ದಾರೆ.
ನೈಜೀರಿಯಾ ಪ್ರಜೆಗಳ ವಿರುದ್ಧ ಗೋವಾದ ಜನರು ದೂರುತ್ತಿದ್ದಾರೆ. ಎಲ್ಲ ರಾಷ್ಟ್ರಗಳ ಜನರು ನಮ್ಮ ರಾಜ್ಯಕ್ಕೆ ಆಗಮಿಸುತ್ತಾರೆ. ಆದರೆ ನೈಜೀರಿಯನ್ನರು ತಮ್ಮ ವರ್ತನೆ,ಧೋರಣೆ ಮತ್ತು ಜೀವನ ಶೈಲಿಯಿಂದಾಗಿ ಇಲ್ಲಿಯ ಜನರಲ್ಲಿ ರೇಜಿಗೆ ಮೂಡಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
ತೀರ ಇತ್ತೀಚಿಗೆ ನೈಜೀರಿಯದ ಪ್ರಜೆಯೋರ್ವ ಅಸಗಾಂವ್‌ನಲ್ಲಿ 31ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು, ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರವಾಸೋದ್ಯಮ ಸಚಿವ ದಿಲೀಪ ಪರುಳೇಕರ್ ಅವರು, ನೈಜೀರಿಯಾ ಪ್ರಜೆಗಳು ಗೋವಾದಲ್ಲಿ ಮಾತ್ರವಲ್ಲ...ಇಡೀ ದೇಶದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ನೈಜೀರಿಯಾ ವಿದ್ಯಾರ್ಥಿಗಳು ಇಲ್ಲಿಗೆ ಓದಿಗಾಗಿ ಬರುತ್ತಾರೆ. ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಿ ಅದನ್ನೊಂದು ನ್ಯಾಯಾಂಗ ವಿಷಯವನ್ನಾಗಿ ಮಾಡುತ್ತಾರೆ ಮತ್ತು ಭಾರತದಲ್ಲಿ ಅಥವಾ ಗೋವಾದಲ್ಲಿ ಉಳಿಯಲು ಪ್ರಯತ್ನಿಸುತ್ತಾರೆ ಹಾಗೂ ಮಾದಕ ದ್ರವ್ಯ ವ್ಯವಹಾರ ಮತ್ತು ಇತರ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಹೇಳಿದ್ದರು.