ಕುಂಜತ್ತೂರು: ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ವಿದ್ಯಾರ್ಥಿ ಸಹಿತ ಇಬ್ಬರು ಬಲಿ
ಮಂಜೇಶ್ವರ, ಜೂ.2: ಫಾರ್ಚುನರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪದವಿ ಕಾಲೇಜು ವಿದ್ಯಾರ್ಥಿಯೋರ್ವನ ಸಹಿತ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಕಳೆದ ರಾತ್ರಿ 1:30ರ ಸುಮಾರಿಗೆ ನಡೆದಿದೆ.
ಉಪ್ಪಳ ಹೀರೋ ಗಲ್ಲಿ ನಿವಾಸಿ, ಮಂಗಳೂರಿನ ಕಾಲೇಜೊಂದರ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಮುನ್ಝಾರ್ ಹಾಗೂ ಕುಂಜತ್ತೂರಿನ ಯುವಕ ಫರ್ಹಾನ್ ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಕುಂಜತ್ತೂರಿನ ಕಬೀರ್, ಉಪ್ಪಳದ ಇಂಝಮಾಮ್ ಎಂಬವರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕುಂಜತ್ತೂರು ಬಳಿ ಈ ಅಪಘಾತ ಸಂಭವಿಸಿದೆ. ಪ್ರವಾಸ ತೆರಳುವ ಉದ್ದೇಶದಿಂದ ಫಾರ್ಚುನರ್ ಕಾರಿನಲ್ಲಿ ಮಂಗಳೂರಿನಿಂದ ಸ್ನೇಹಿತನೊಬ್ಬನನ್ನು ಕರೆತರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಕಾರಿನಲ್ಲಿ ಒಟ್ಟು ಎಂಟು ಮಂದಿಯಿದ್ದರು. ಇವರಿದ್ದ ಕಾರು ಕುಂಜತ್ತೂರು ಮಾಸ್ಕೋ ಹಾಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದವರನ್ನು ಸ್ಥಳೀಯರು ಹರಸಾಹಸಪಟ್ಟು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಮುನ್ಝಾರ್ ಹಾಗೂ ಫರ್ಹಾನ್‌ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.