ಬಾವಿಯೊಳಗೆ ಕುಸಿದ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ಮೃತದೇಹ ಹೊರತೆಗೆದ ಅಗ್ನಿಶಾಮಕ ದಳ
ಕಾಸರಗೋಡು, ಜೂ.2: ಉಳಿಯತ್ತಡ್ಕದಲ್ಲಿ ನಿನ್ನೆ ಬಾವಿ ದುರಸ್ತಿಯ ವೇಳೆ ಕುಸಿದುಬಿದ್ದ ಮಣ್ಣಿನಡಿ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕ, ಸುಳ್ಯದ ಮೋಹನ್ ಪಾಟಾಳಿ(45)ಯವರ ಮೃತದೇಹವನ್ನು ಇಂದು ಬೆಳಗ್ಗೆ ಹೊರೆತೆಗೆಯಲಾಗಿದೆ. ಬುಧವಾರ ಮಧ್ಯಾಹ್ನದ ವೇಳೆ ಉಳಿಯತ್ತಡ್ಕ ಬಳಿ ಬಾವಿ ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು ಒಮ್ಮೆಲೆ ಮೇಲ್ಭಾಗದಿಂದ ಕಲ್ಲು-ಮಣ್ಣು ಕುಸಿದುಬಿದ್ದ ಪರಿಣಾಮ ಮೋಹನ್ ಹಾಗೂ ಜೊತೆಗಿದ್ದ ಮೂವರು ಅದರೊಳಗೆ ಸಿಲುಕಿಕೊಂಡಿದ್ದರು. ಈ ಪೈಕಿ ಉಳಿದ ಮೂವರನ್ನು ಮೇಲೆತ್ತಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೆ ಮೋಹನ್ ಮಾತ್ರ ಮಣ್ಣಿನೊಳಗೆ ಹೂತು ಹೋಗಿದ್ದರು. ನಿನ್ನೆ ರಾತ್ರಿ 10 ಗಂಟೆಯ ತನಕ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಪ್ರಯತ್ನಿಸಿದರೂ ಅವರನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಭಾರೀ ಪ್ರಮಾಣದ ಕಲ್ಲು ಮಣ್ಣುಗಳು ಕುಸಿದು ಬಿದ್ದಿರುವುದು ಹಾಗೂ ಆಗಾಗ ಸುರಿಯುತ್ತಿರುವ ಮಳೆಯೂ ಕಾರ್ಯಾಚರಣೆಗೆ ಅಡ್ಡಿಯಾಗಿದ್ದವು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೋಹನ್‌ರ ಮೃತದೇಹವನ್ನು ಮೇಲೆತ್ತಿದ್ದಾರೆ.