×
Ad

ಪ್ರತಿಭಟನೆ ಕೈಬಿಡಿ: ಪೊಲೀಸರಿಗೆ ಎಸ್‌ಡಿಪಿಐ ಒತ್ತಾಯ

Update: 2016-06-02 12:35 IST

ಮಂಗಳೂರು, ಜೂ.2: ವೇತನ ತಾರತಮ್ಯ ನಿವಾರಣೆ, ಭತ್ತೆ ಹೆಚ್ಚುವರಿ ಗಂಟೆಗಳ ದುಡಿಮೆಗೆ ಹೆಚ್ಚು ವೇತನ ಸೇರಿದಂತೆ 23 ಬೇಡಿಕೆಗಳ ಈಡೇರಿಕೆಗಳನ್ನು ಸರಕಾರ ಈಡೇರಿಸಬೇಕು ಮತ್ತು ಪೊಲೀಸರು ಜೂ.4ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕೈಬಿಡುವಂತೆ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಒತ್ತಾಯಿಸಿದ್ದಾರೆ.
ನಗರದ ಎಸ್‌ಡಿಪಿಐ ಜಿಲ್ಲಾ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಎಸ್‌ಡಿಪಿಐ ಸರಕಾರವನ್ನು ಒತ್ತಾಯಿಸುತ್ತದೆ. ಆದರೆ ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ, ಸುಗಮ ಸಂಚಾರದ ಬಹುದೊಡ್ಡ ಜವಾಬ್ದಾರಿ ಇರುವ ಪೊಲೀಸರು ಪ್ರತಿಭಟನೆ ಹಾದಿ ಹಿಡಿಯದೆ ಸಂಧಾನದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಅವರು ಹೇಳಿದರು.
ಪೊಲೀಸರು ಪ್ರತಿಭಟನೆಗಳಿದರೆ ಜನತೆ ಪೊಲೀಸರ ಮೇಲಿಟ್ಟಿರುವ ಭರವಸೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಜನತೆ ಈ ಪ್ರತಿಭಟನೆಯ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಪ್ರತಿಭಟನೆಯನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಅಪಾಯವೂ ಇದೆ. ಆದುದರಿಂದ ಜನರ ಹಿತಕ್ಕಾಗಿ ಪ್ರತಿಭಟನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ವೇತನ ತಾರತಮ್ಯ, ದಿನಕ್ಕೆ 18 ಗಂಟೆಗಳ ಕೆಲಸ, ಭಡ್ತಿಯಲ್ಲಿ ವಿಳಂಭ, ರಜೆ ಮಂಜೂರಾತಿಯಲ್ಲಿ ಮೇಲಾಧಿಕಾರಿಗಳ ಕಿರುಕುಳ,ರಾಜಕಾರಣಿಗಳ ವಿಪರೀತ ಹಸ್ತಕ್ಷೇಪ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೊಳಪಡುತ್ತಿರುವ ಸಮಸ್ಯೆಗಳಾಗಿದೆ. ಆದರೆ ಸರಕಾರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದೆ ಪ್ರತಿಭಟನೆ ಹತ್ತಿಕ್ಕಲು ವಿವಿಧ ಮಾರ್ಗ ಅನುಸರಿಸುತ್ತಿದೆ ಎಂದು ಟೀಕಿಸಿದರು.
   ಎಸ್‌ಡಿಪಿಐ ದ.ಕ. ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಡಾಜೆ ಜಿಲ್ಲೆಯಲ್ಲಿ ಬಿಜೆಪಿ ನಾಯಕರುಗಳು ಪೊಲೀಸರ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲೆಯ ಪೊಲೀಸರ ವರ್ಗಾವಣೆಯನ್ನು ಮಾಡಲು ಪ್ರತಿಭಟನೆಯನ್ನು ನಡೆಸಿದ್ದಾರೆ. ಇಂತಹ ಒತ್ತಡಗಳ ಮೂಲಕ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪ್ರ.ಕಾರ್ಯದರ್ಶಿ ನವಾಝ್ ಉಳ್ಳಾಲ, ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News