ಮಂಗಳೂರು: ಸಮಾನ ವೇತನ, ಭತ್ತೆಗೆ ಒತ್ತಾಯಿಸಿ ಸರಕಾರಿ ನೌಕರರ ಮುಷ್ಕರ
ಮಂಗಳೂರು, ಜೂ.2: ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನ ಹಾಗೂ ಭತ್ತೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ನೀಡಿರುವ ಕರೆಯನ್ವಯ ದ.ಕ. ಜಿಲ್ಲೆಯಲ್ಲೂ ರಾಜ್ಯ ಸರಕಾರಿ ನೌಕರರು ಗುರುವಾರ ಮುಷ್ಕರ ನಡೆಸಿದರು.
ಮುಷ್ಕರಕ್ಕೆ ದ.ಕ. ಜಿಲ್ಲಾ ಡಿ ವರ್ಗ ಸರಕಾರಿ ನೌಕರರ ಸಂಘ ಸಂಪೂರ್ಣ ಬೆಂಬಲ ಸೂಚಿಸಿದ್ದು, ಜಿಲ್ಲೆಯ ಡಿ ಗ್ರೂಪ್ ನೌಕರರು ಕಚೇರಿಗಳಿಗೆ ಗೈರು ಹಾಜರಾಗಿದ್ದರು. ಬಳಿಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಪ್ರಧಾನ ಕಾರ್ಯದರ್ಶಿ ಉದಯ ರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಕೆ.ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್
ಮಂಗಳೂರಿನ ಎಸ್.ಕೆ.ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಕೂಡಾ ಮುಷ್ಕರ ಕರೆಗೆ ಬೆಂಬಲ ಸೂಚಿಸಿದ್ದು, ಕೆಲಸಕ್ಕೆ ಗೈರು ಹಾಜರಾಗಿ ಮಂಗಳೂರು ಮಹಾನಗರ ಪಾಲಿಕೆಯೆದುರು ಧರಣಿ ನಡೆಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನಪಾ ಆಯುಕ್ತರ ಮೂಲಕ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿತು.
ವಿವಿಧ ಸರಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಕೂಡಾ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ಸರಕಾರಿ ಕಚೇರಿಗಳು ಬಹುತೇಕ ಖಾಲಿಯಾಗಿದ್ದವು. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.