×
Ad

ಇಂದಿನಿಂದ ಜೂ.15ರವರೆಗೆ ಶಾಲೆಗಳಲ್ಲಿ ಕೊಂಕಣಿ ಜಾಗೃತಿ ಅಭಿಯಾನ: ರೋಯ್ ಕ್ಯಾಸ್ಟಲಿನೊ

Update: 2016-06-02 14:50 IST

ಮಂಗಳೂರು, ಜೂ 2: ಶಾಲೆಗಳಲ್ಲಿ 2007ರಿಂದ ಕೊಂಕಣಿ ಭಾಷೆ ಕಲಿಕೆ ಆರಂಭವಾಗಿದ್ದರೂ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೊಂಕಣಿ ಕಲಿಯುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಇಂದಿನಿಂದ ಜೂ.15ರವರೆಗೆ ಶಾಲೆಗಳಲ್ಲಿ ಕೊಂಕಣಿ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಹೇಳಿದರು.

  ನಗರದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಸ್ ಬ್ಯಾಂಡ್‌ನೊಂದಿಗೆ ಮೆರವಣಿಗೆಯಲ್ಲಿ ಶಾಲೆಗಳಿಗೆ ತೆರಳಿ ಮಕ್ಕಳನ್ನು ಕೊಂಕಣಿ ಕಲಿಯಲು ಪ್ರೇರೆಪಸಿಲಾಗುತ್ತದೆ. ಈ ಬಾರಿ 100 ಶಾಲೆಗಳಲ್ಲಿ ಕೊಂಕಣಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
 2015-16ನೆ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ 77 ವಿದ್ಯಾರ್ಥಿಗಳು ಕೊಂಕಣಿ ಭಾಷೆಯ ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾರೆ. ಎಸೆಸೆಲ್ಸಿಯಲ್ಲಿ ಕೊಂಕಣಿ ಭಾಷೆಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಪಿಯುಸಿಯಲ್ಲಿ ಕೊಂಕಣಿ ಭಾಷೆಯನ್ನು ತೆಗೆದುಕೊಳ್ಳುವಂತೆ ಪಿಯು ಇಲಾಖೆಯನ್ನು ಕೋರಲಾಗುವುದು. ಈಗಾಗಲೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಎಂಎ ಆರಂಭ ಮಾಡಲು ಬೇಕಾದ ತಯಾರಿಗಳು ನಡೆಯುತ್ತಿವೆ. ಇದಕ್ಕೆ ಗೋವಾ ವಿಶ್ವವಿದ್ಯಾನಿಲಯದ ಸಹಕಾರವನ್ನು ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
 ಕಾರವಾರದಲ್ಲಿ ಕೊಂಕಣಿ ಭಾಷೆ ಕಲಿಕೆಯನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮತ್ತು ಮಾರ್ಚ್‌ನಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೊಂಕಣಿ ಭಾಷೆಯನ್ನು ಶಾಲೆಗಳಲ್ಲಿ ಆಯ್ಕೆ ಮಾಡಬಹುದು ಎಂದು ರೋಯ್ ಕ್ಯಾಸ್ಟಲಿನೊ ವಿಶ್ವಾಸ ವ್ಯಕ್ತಪಡಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಡಾ. ಬಿ.ದೇವದಾಸ್ ಪೈ, ಸದಸ್ಯರಾದ ದೇವದಾಸ್ ಪೈ, ಅಶೋಕ್ ಕಾಸರಗೋಡು, ಡಾ.ಅರವಿಂದ ಶಾನುಭೋಗ್, ಕಮಲಾ ಶೇಟ್, ಶೇಖರ್ ಗೌಡ ಬಜ್ಪೆ, ಯಾಹ್‌ಕೂಬ್ ಅಹ್ಮದ್, ಶಿವಾನಂದ್ ಶೇಟ್, ಲಾರೆನ್ಸ್ ಡಿಸೋಜ, ವಾರಿಜಾ ನೀರೆಬೈಲು, ಮಮತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News