×
Ad

ಪೊಲೀಸ್ ಸಿಬ್ಬಂದಿಗಳಿಂದ ಅಸಭ್ಯ ವರ್ತನೆ ಆರೋಪ: ಐಜಿಪಿಗೆ ಮನವಿ

Update: 2016-06-02 17:04 IST

ಮಂಗಳೂರು, ಜೂ. 2: ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಬ್ಬರು ತನ್ನ ಜತೆ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿರುವ ಕೋಡಿ ಕನ್ಯಾನ ನಿವಾಸಿ ಸುಚಿತ್ರಾ ಎಂಬವರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದಲೂ ತನಗೆ ನ್ಯಾಯ ದೊರಕಿಲ್ಲವೆಂದು ಆರೋಪಿಸಿ ಇಂದು ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿದ ಬಳಿಕ ಮಾನವ ಹಕ್ಕು ಯುನಿವರ್ಸಲ್ ಫೆಡರೇಶನ್ ಸಂಘಟನೆಯ ಉಡುಪಿ ಮತ್ತು ದ.ಕ. ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಸುದ್ದಿಗೋಷ್ಠಿಲ್ಲಿಂದು ಘಟನೆಯ ವಿವರ ನೀಡಿ, ಐಜಿಪಿಯಿಂದಲೂ ತನಗೆ ನ್ಯಾಯ ದೊರೆಯದಿದ್ದರೆ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದಾಗಿ ಹೇಳಿದರು.

ಬಾರ್ಕೂರು ರಸ್ತೆಯಲ್ಲಿ ಮೇ 20ರಂದು ತನ್ನ ಅಣ್ಣನ ಮೇಲೆ ಹಲ್ಲೆ ನಡೆದಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾದ ಸಂದರ್ಭ ತಾನು ಆಸ್ಪತ್ರೆಯಲ್ಲಿ ಆತನ ಆರೈಕೆಯಲ್ಲಿ ತೊಡಗಿದ್ದ ವೇಳೆ ವಿಚಾರಣೆಗೆ ಬಂದಿದ್ದ ಬ್ರಹ್ಮಾವರ ಪೊಲೀಸ್ ಠಾಣಾ ಎಸ್‌ಐ ಹಾಗೂ ಸಿಬ್ಬಂದಿ ತನ್ನ ಜತೆ ಅಸಭ್ಯವಾಗಿ ವರ್ತಿಸಿದ್ದರು. ಈ ಬಗ್ಗೆ ಉಡುಪಿ ಮಾನವ ಹಕ್ಕು ಯುನಿವರ್ಸಲ್ ಫೆಡರೇಶನ್‌ನ ಮಹಿಳಾ ವಿಭಾಗದ ಮುಖ್ಯಸ್ಥೆ ಜೊತೆ ತಾನು ಪೊಲೀಸ್ ವರಿಷ್ಠಾಧಿಕಾರಿಗೆ ಮೇ 23ರಂದು ದೂರು ನೀಡಲು ಹೋಗಿದ್ದ ಸಂದರ್ಭ ಅವರು ಕೂಡಾ ನ್ಯಾಯ ಒದಗಿಸುವ ಬದಲು ತನ್ನನ್ನು ಬೆದರಿಸಿದ್ದಾರೆಂದು ಯುವತಿ ದೂರಿದರು.

‘‘ಮಾರನೆ ದಿನ ಮತ್ತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಬಳಿ ಹೋದಾಗ ಅವರು ಹಿಂದಿನ ದಿನಕ್ಕಿಂತ ಸಮಾಧಾನಕರವಾಗಿ ಮಾತನಾಡಿ, ನಡೆದ ಘಟನೆಯನ್ನು ಪ್ರಾತ್ಯಕ್ಷಿಕೆ ನೀಡುವಂತೆ ಕೇಳಿಕೊಂಡರು. ಆದರೆ ಅಲ್ಲಿ ನಮ್ಮಿಬ್ಬರು ಮಹಿಳೆಯರನ್ನು ಹೊರತುಪಡಿಸಿ ಎಲ್ಲರೂ ಪುರುಷರೇ ಇದ್ದ ಕಾರಣ ನನ್ನ ಮೇಲಾದ ಕಿರುಕುಳದ ಸಂಪೂರ್ಣ ಮಾಹಿತಿಯನ್ನು ನೀಡಲು ಸಾಧ್ಯವಾಗಿರಲಿಲ್ಲ. ವರಿಷ್ಠಾಧಿಕಾರಿಯವರು ತಾನು ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿರುವುದಾಗಿ ಹೇಳಿ, ಅಲ್ಲಿ ಹೇಳಿರುವುದನ್ನು ಲಿಖಿತವಾಗಿ ದೂರು ನೀಡುವಂತೆ ತಿಳಿಸಿದರು. ಅದರಂತೆ ದೂರು ನೀಡಿದ್ದರೂ ಯಾವುದೇ ನ್ಯಾಯ ಸಿಗದ ಕಾರಣ ಇದೀಗ ಪಶ್ಚಿಮ ವಲಯ ಐಜಿಪಿಗೆ ದೂರು ನೀಡುವುದು ಅನಿವಾರ್ಯವಾಯಿತು ಎಂದು ಯುವತಿ ಹೇಳಿದರು.

‘‘ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಮ್ಮ ಜತೆ ನಡೆದುಕೊಂಡ ವರ್ತನೆ ತೀರಾ ಆಘಾತಕಾರಿಯಾಗಿತ್ತು. ಅವರ ಮೇಲೆ ಭಾರೀ ವಿಶ್ವಾಸ, ನ್ಯಾಯದ ನಂಬಿಕೆ ಇರಿಸಿದ್ದ ನಾನು ಅವರ ಅಂದಿನ ವರ್ತನೆಯನ್ನು ಊಹಿಸಲೂ ಸಾಧ್ಯವಿಲ್ಲ. ಅಂದು ಅಲ್ಲಿನ ವಾತಾವರಣ ನೋಡಿ ಘಟನೆಯ ಬಗ್ಗೆ ನಮ್ಮ ಜತೆಗಿದ್ದ ಯುವಕನೊಬ್ಬ ರೆಕಾರ್ಡ್ ಕೂಡಾ ಮಾಡಿಕೊಂಡಿದ್ದಾನೆ. ಇದನ್ನು ತಿಳಿದು ಮರುದಿನ ಸರ್ಕಲ್ ಇನ್‌ಸ್ಪೆಕ್ಟರ್‌ರನ್ನು ಕಳುಹಿಸಿ ರಾಜಿ ಮಾಡಿಕೊಳ್ಳುವಂತೆಯೂ ಕೋರಲಾಯಿತು’’ ಎಂದು ಮಾನವ ಹಕ್ಕು ಯುನಿವರ್ಸಲ್ ಫೆಡರೇಶನ್‌ನ ಉಡುಪಿ ಘಟಕದ ಮಹಿಳಾ ವಿಭಾಗದ ಮುಖ್ಯಸ್ಥೆ ಜಯಶ್ರೀ ಭಟ್ ಹೇಳಿದರು. ಐಜಿಪಿಯಿಂದಲೂ ನ್ಯಾಯ ದೊರೆಯದಿದ್ದರೆ ಮುಂದೆ ರಾಜ್ಯ ಮಟ್ಟದಲ್ಲಿ ಕೊನೆಗೆ ಪ್ರಧಾನಿ ನರೇಂದ್ರ ಮೋದಿವರೆಗೂ ಹೋರಾಟ ಮುಂದುವರಿಸಲಿದ್ದೇವೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಫೌಂಡೇಶನ್‌ನ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಸಜಿನಿ ವಿನಯ್, ಉಡುಪಿ ಘಟಕದ ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News