ಸುಳ್ಯ: ಸರಕಾರಿ ನೌಕರರ ಮುಷ್ಕರಕ್ಕೆ ಸುಳ್ಯದಲ್ಲಿ ಉತ್ತಮ ಪ್ರತಿಕ್ರಿಯೆ
ಸುಳ್ಯ, ಜೂ. 2: ರಾಜ್ಯ ಸರಕಾರಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗುರುವಾರ ಕರೆ ನೀಡಿದ್ದ ಮುಷ್ಕರಕ್ಕೆ ಸುಳ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಷ್ಕರಕ್ಕೆ ಸರಕಾರಿ ನೌಕರರ ಸಂಘದ ಸುಳ್ಯ ಘಟಕ ಬೆಂಬಲ ನೀಡಿತ್ತು.
ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘವು ನೀಡಿರುವ ಕರೆಯಂತೆ 7ನೆ ವೇತನ ಆಯೋಗದ ಜಾರಿ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನ ಭತ್ತೆ ಹಾಗೂ ಇತರ ಸೌಲಭ್ಯಗಳನ್ನು ರಾಜ್ಯ ಸರಕಾರದ ನೌಕರರಿಗೂ ಮಂಜೂರು ಮಾಡುವಂತೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ತಾಲೂಕು ಕಚೇರಿ, ತಾಲೂಕು ಪಂಚಾಯತ್ ಕಚೇರಿ ಸೇರಿದಂತೆ ಹೆಚ್ಚಿನ ಸರಕಾರಿ ಕಚೇರಿಗಳು ಮುಚ್ಚಿದ್ದವು. ಕೆಲವು ಇಲಾಖೆಗಳ ಕಚೇರಿಗಳಲ್ಲಿ ದಿನಗೂಲಿ ನೌಕರರು ಹಾಜರಾಗಿದ್ದು, ಕರ್ತವ್ಯ ನಿರ್ವಹಿಸಿದರು. ಸರಕಾರಿ ಶಾಲಾ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಶಿಕ್ಷಣ ಇಲಾಖೆ ಬೋಧಕೇತರ ನೌಕರರ ಸಂಘ, ಕಂದಾಯ ಇಲಾಖಾ ನೌಕರರ ಸಂಘ, ಅರಣ್ಯ ಇಲಾಖಾ ನೌಕರರ ಸಂಘ, ಆರೋಗ್ಯ ಇಲಾಖಾ ನೌಕರರ ಸಂಘ, ವಾಹನ ಚಾಲಕರ ಸಂಘ, ಪಂಚಾಯತ್ ರಾಜ್ ನೌಕರರ ಸಂಘಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದವು. ತುರ್ತು ಹಾಗೂ ಅಗತ್ಯ ಸೇವೆಗಳಾದ ಸಾರಿಗೆ, ವೈದ್ಯಕೀಯ, ಪೊಲೀಸ್, ಅಗ್ನಿಶಾಮಕ ಇಲಾಖಾ ನೌಕರರು ಕರ್ತವ್ಯಕಕ್ಕೆ ಹಾಜರಾಗಿದ್ದರು.
ಅನುದಾನಿತ ಶಾಲಾ ಕಾಲೇಜುಗಳು, ಸಹಕಾರಿ ಸಂಘಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದವು. ಕೇಂದ್ರ ಸರಕಾರದ ಅಡಿ ಬರುವ ಬ್ಯಾಂಕ್, ಅಂಚೆ ಕಚೇರಿ, ಎಲ್ಲೈಸಿ ಕಚೇರಿಗಳು ಸಾರ್ವಜನಿಕ ಸೇವೆಗೆ ಲಭ್ಯವಿದ್ದವು.
ಹೊರಗುತ್ತಿಗೆ ನೌಕರರ ಸ್ಥಿತಿ ಅತಂತ್ರ
ಸುಳ್ಯದಲ್ಲಿ ಸುಮಾರು 200 ಅಧಿಕ ಹೊರಗುತ್ತಿಗೆ ನೌಕರರು ಪ್ರತಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ವೇತನ 10ಸಾವಿರ ಇದ್ದರೂ ಇವರಿಗೆ ಕೇವಲ ಏಳು ಸಾವಿರ ರೂ. ಸಿಗುತ್ತಿದೆ. ಹೀಗೆ ಗುತ್ತಿಗೆ ಆಧಾರದಲ್ಲಿ ರಾಜ್ಯದಲ್ಲಿ ಸಾವಿರಗಟ್ಟಲೆ ನೌಕರರು ದುಡಿಯುತ್ತಿದ್ದಾರೆ. ಆದರೆ ಇವರ ವೇತನದ ತಾರತಮ್ಯ ಯಾರಲ್ಲಿ ಹೇಳಬೇಕೆಂಬುದು ನೌಕರರ ಅಳಲು. ಸರಕಾರಿ ನೌಕರರ ಮುಷ್ಕರದಂದು ಈ ನೌಕರರು ಕಚೇರಿಗೆ ತೆರಳುವುದೋ ಮನೆಗೆ ಹೋಗುವುದೋ ಎನ್ನುವ ಅತಂತ್ರ ಸ್ಥಿತಿಯಲ್ಲಿದ್ದರು. ಆದರೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲವು ನೌಕರರು ಎದುರಿನಿಂದ ಬೀಗ ಹಾಕಿ ಕಚೇರಿ ಒಳಗೆ ಕುಳಿತ ಪ್ರಸಂಗವೂ ನಡೆಯಿತು.