×
Ad

ಗ್ಯಾಸ್ ಟ್ಯಾಂಕರ್‌ನ ಬ್ರೇಕ್ ವೈಫಲ್ಯ: ತಪ್ಪಿದ ಭಾರೀ ಅನಾಹುತ!

Update: 2016-06-02 18:14 IST

ಮಂಗಳೂರು, ಜೂ.2: ನಗರದ ಪಂಪ್‌ವೆಲ್ ವೃತ್ತದ ಬಳಿ ಇಂದು ಮಧ್ಯಾಹ್ನದ ವೇಳೆ ಗ್ಯಾಸ್ ಟ್ಯಾಂಕರ್ ಬ್ರೇಕ್ ವೈಫಲ್ಯಗೊಂಡು ಟಯರ್ ಸ್ಫೋಟಗೊಂಡ ಘಟನೆ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದ್ದರೂ, ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರದಲ್ಲಿ ಅಡಚಣೆ ಉಂಟಾದ ಘಟನೆ ನಡೆದಿದೆ.

ಪಣಂಬೂರಿನಿಂದ ತಮಿಳುನಾಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಂಪ್‌ವೆಲ್ ವೃತ್ತದ ಬಳಿ ನಂತೂರು ಕಡೆ ಸಾಗುವ ದಾರಿಯಲ್ಲಿ ಬ್ರೇಕ್‌ಫೇಲ್‌ಗೊಂಡಿತು. ಈ ಸಂದರ್ಭ ಟ್ಯಾಂಕರ್‌ನ ಚಾಲಕ ಅನಾಹುತ ತಪ್ಪಿಸುವ ಸಲುವಾಗಿ ವಾಹನವನ್ನು ತಿರುಗಿಸಿದ ಪರಿಣಾಮ ಟ್ಯಾಂಕರ್ ಅಲ್ಲಿದ್ದ ಡಿವೈಡರ್‌ಗೆ ಢಿಕ್ಕಿ ಹೊಡೆದು ಟಯರ್ ಸ್ಫೋಟಗೊಂಡಿತು.

ಟ್ಯಾಂಕರ್‌ನಲ್ಲಿ ಗ್ಯಾಸ್ ತುಂಬಿದ್ದು, ಯಾವುದೇ ರೀತಿಯಲ್ಲಿ ಅನಿಲ ಸೋರಿಕೆ ಆಗದ ಕಾರಣ ಭಾರೀ ಅನಾಹುತ ತಪ್ಪಿದೆ. ಟ್ಯಾಂಕರ್ ಬ್ರೇಕ್ ವೈಫಲ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಘಟನೆ ವಾಹನ ಸಂಚಾರ ದಟ್ಟವಾಗಿರುವ ಪಂಪ್‌ವೆಲ್ ಜಂಕ್ಷನ್‌ನಲ್ಲಿ ನಡೆದಿದ್ದು ಕೆಲ ಹೊತ್ತು ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ನಿಂತ ಪರಿಣಾಮದಿಂದಾಗಿ ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪ್ರಯಾಣಿಕರು ಮತ್ತಷ್ಟು ತೊಂದರೆ ಎದುರಿಸಬೇಕಾಯಿತು. ರಾಷ್ಟ್ರೀಯ ಹೆದ್ದಾರಿಯಾಗಿರುವ ಐದಾರು ಪ್ರಮುಖ ರಸ್ತೆಗಳ ಕೂಡು ರಸ್ತೆಯಾಗಿರುವ ಪಂಪ್‌ವೆಲ್‌ನಲ್ಲಿ ಈ ಘಟನೆ ಸಂಭವಿಸಿದ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News