ಲಿಂಗಾನುಪಾತ ಕುಸಿತ ಅಪಾಯದ ಸಂಕೇತ: ಎ.ಬಿ. ಇಬ್ರಾಹೀಂ
ಮಂಗಳೂರು, ಜೂ.2: 1980ರಲ್ಲಿ 1063ರಷ್ಟಿದ್ದ ಲಿಂಗಾನುಪಾತ 2016ರಲ್ಲಿ 1018ಕ್ಕೆ ಇಳಿದಿದ್ದು, 5 ವರ್ಷದೊಳಗಿನ ಲಿಂಗಾನುಪಾತ ಕೇವಲ 946ನಷ್ಟಿದೆ. ಈ ಪ್ರಮಾಣದ ಕುಸಿತ ಅಪಾಯದ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದ್ದಾರೆ.
ನಗರದ ಐಎಂಎ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಸಕ್ಷಮ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ‘ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ- 1996’ ಕುರಿತ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹರಿಯಾಣದಲ್ಲಿ ಈ ಹಿಂದೆ ಹೆಣ್ಣು ಮಕ್ಕಳ ಅನುಪಾತ ಭಾರೀ ಪ್ರಮಾಣದಲ್ಲಿ ಕುಸಿದಿತ್ತಾದರೂ, ಬಳಿಕ ಈ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದರಿಂದ ಸಾಕಷ್ಟು ಬದಲಾವಣೆಗಳಾಗಿವೆ. ಲಿಂಗಾನುಪಾತದಲ್ಲಿ ಕುಸಿತದ ವಿರುದ್ಧ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿದ್ದು, ಈ ಸಮಸ್ಯೆಗಳಿಂದ ಪರಿಹಾರ ಪಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕು. ಹಲವು ಆಸ್ಪತ್ರೆಗಳು ಭ್ರೂಣ ಪತ್ತೆ ಪ್ರಕ್ರಿಯೆಯನ್ನು ನಿಲ್ಲಿಸಿವೆಯಾದರೂ, ಕೆಲವೆಡೆ ಈ ಪ್ರಕ್ರಿಯೆಗಳು ನಡೆಯುತ್ತಿದ್ದು ಅವುಗಳನ್ನು ಕೂಡಾ ನಿಲ್ಲಿಸಿ ಹೆಣ್ಣು ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕು. ಲಿಂಗಾನುಪಾತದಲ್ಲಿ ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಪ್ರಸ್ತುತ 15ನೇ ಸ್ಥಾನಕ್ಕಿಳಿದಿರುವುದು ಆಘಾತಕಾರಿ ವಿಷಯವಾಗಿದೆ ಎಂದರು.
‘ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ- 1996’ಕುರಿತು ಕೆ .ಎಸ್. ಹೆಗ್ಡೆ ಆಸ್ಪತ್ರೆಯ ಡಾ.ರಶ್ಮಿ, ಡಾ.ರಾಘವೇಂದ್ರ ಭಟ್, ಡಾ.ವಸಂತಿ ಶೆಟ್ಟಿ ಮತ್ತು ವಕೀಲರಾದ ಅನಿತಾ ಮಾಹಿತಿ ನೀಡಿದರು.
ದ.ಕ ಜಿ.ಪಂ ಸಿಇಒ ಪಿ.ಐ ಶ್ರೀವಿದ್ಯಾ, ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.