×
Ad

ಪುತ್ತೂರು: ಕರ್ತವ್ಯಕ್ಕೆ ಗೈರಾಗಿ ಸರಕಾರಿ ನೌಕರರ ಪ್ರತಿಭಟನೆ

Update: 2016-06-02 18:55 IST

ಪುತ್ತೂರು, ಜೂ. 2: ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನ, ಭತ್ಯೆ ಹಾಗೂ ಇತರ ಸೌಲ್ಯಗಳನ್ನು ರಾಜ್ಯ ಸರಕಾರವು ರಾಜ್ಯ ಸರಕಾರಿ ನೌಕರರಿಗೂ ಮಂಜೂರು ಮಾಡುವ ಮೂಲಕ ಸಂಘದ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ನೀಡಿದ ಕರೆಯಂತೆ ಪುತ್ತೂರು ತಾಲೂಕಿನಲ್ಲಿಯೂ ಎಲ್ಲಾ ಇಲಾಖೆಗಳ ರಾಜ್ಯ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಪುತ್ತೂರು ತಾಲೂಕಿನಲ್ಲಿಯೇ ಅಧಿಕ ರಾಜ್ಯ ಸರಕಾರಿ ನೌಕರರನ್ನು ಹೊಂದಿರುವ ಶಿಕ್ಷಣ ಇಲಾಖೆಯ ಶಿಕ್ಷಕರು ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಗುರುವಾರ ಶಾಲೆಗಳಲ್ಲಿ ಪಾಠ ನಡೆಸದೆ ಮುಚ್ಚಲಾಗಿತ್ತು. ಕಂದಾಯ ಇಲಾಖೆ, ನೋಂದಣಿ ಕಚೇರಿ, ಸಾರಿಗೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ , ಸೇರಿದಂತೆ ಎಲ್ಲಾ ಇಲಾಖೆಗಳ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾದ ಕಾರಣ ಯಾವುದೇ ಸೇವೆಗಳು ಇರಲಿಲ್ಲ. ನೌಕರರ ಪ್ರತಿಭಟನೆಯ ಮಾಹಿತಿ ಅರಿಯದೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬಂದ ಸಾರ್ವಜನಿಕರು ಹಿಂತಿರುಗಬೇಕಾಗಿ ಬರುವ ಮೂಲಕ ತೊಂದರೆ ಅನುಭವಿಸಬೇಕಾಯಿತು.

ಗುರುವಾರ ಬೆಳಗ್ಗಿನ ವೇಳೆ ಕೆಲವೊಂದು ಕಚೇರಿಗಳ ಬಾಗಿಲು ತೆರೆದಿತ್ತು. ಬಳಿಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಅಲ್ಲಿಗೆ ತೆರಳಿ ಬಾಗಿಲು ಮುಚ್ಚುವಂತೆ ಮನವೊಲಿಸಿ ಬಾಗಿಲು ಮುಚ್ಚಿಸುವಲ್ಲಿ ಯಶಸ್ವಿಯಾದರೆಂದು ತಿಳಿದು ಬಂದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯವಿತ್ತು. ಪುತ್ತೂರು ನಗರಸಭೆಯ ಕಚೇರಿ ತೆರೆದಿದ್ದು, ಅಲ್ಲಿನ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿದ್ದರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಎಂದಿನಂತೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು. ಆಧಾರ್ ಕಾರ್ಡು ವ್ಯವಸ್ಥೆಯನ್ನು ಗುತ್ತಿಗೆದಾರರು ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಆಧಾರ ಕಾರ್ಡಿಗೆ ಫೋಟೊ ತೆಗೆಯುವ ಕೆಲಸ ಜಾರಿಯಲ್ಲಿತ್ತು.

ಕರ್ತವ್ಯಕ್ಕೆ ಗೈರುಹಾಜರಾದ ಬಹುತೇಕ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ನೌಕರರು ಪುತ್ತೂರಿನ ಮಿನಿ ವಿಧಾನ ಸೌಧದ ಮುಂದೆ ಮುಷ್ಕರ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News