ಸೋಗೆ ಸೂರಿನಲ್ಲಿ ಬದುಕುತ್ತಿದ್ದಾರೆ ಕೃಷ್ಣ ನಾಯ್ಕ
ಪುತ್ತೂರು, ಜೂ.2: ಬಡವರಿಗಾಗಿ ಸರಕಾರದಲ್ಲಿ ನೂರಾರು ಯೋಜನೆಗಳಿವೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಲೇ ಇದೆ. ಆದರೆ ಇದೆಲ್ಲಾ ನೈಜ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ಜೀವಂತ ಉದಾಹರಣೆಯಿದೆ.
ಸೋಗೆಯ ಸೂರು, ಮಣ್ಣಿನ ಗೋಡೆಯ ಜೋಪಡಿಯಲ್ಲಿ ಬದುಕುತ್ತಿರುವ ಕೃಷ್ಣ ನಾಯ್ಕ ಎಂಬವರ ಕುಟುಂಬವೊಂದು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಜಕಳ ಎಂಬಲ್ಲಿ ಕಳೆದ ಸುಮಾರು 20 ವರ್ಷಗಳಿಂದ ವಾಸ ಮಾಡುತ್ತಿದೆ. ಸರಕಾರದ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಈ ಕುಟುಂಬ ಸಾಕ್ಷಿಯಾಗಿದೆ. ಕೃಷ್ಣ ನಾಯ್ಕ ಕೂಲಿ ಕಾರ್ಮಿಕರಾಗಿದ್ದು ತನ್ನ ಕುಟುಂಬದೊಂದಿಗೆ ಕಳೆದ 21 ವರ್ಷಗಳಿಂದ ಪುಣಚ ಮೀಸಲು ಅರಣ್ಯದ ಅಂಚಿನಲ್ಲಿ ಗುಡಿಸಲು ರಚಿಸಿಕೊಂಡು ವಾಸ್ತವ್ಯ ನಡೆಸುತ್ತಿದ್ದಾರೆ. ಆದರೆ ಈ ತನಕ ಮನೆಗೆ ವಾಸ್ತವ್ಯದ ದಾಖಲೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಗುಡಿಸಲಿನ ಮುಂದೆ ಬೆಳೆದು ನಿಂತ ಎರಡು ತೆಂಗಿನ ಮರ ಮಾತ್ರ ಅವರ ವಾಸ್ತವ್ಯಕ್ಕೆ ಸಾಕ್ಷಿಯಷ್ಟೆ.
ಅರಣ್ಯ ಭೂಮಿಯ ಸಮೀಪದಲ್ಲೇ ಇರುವ ಈ ಮನೆಯನ್ನು ದಾಖಲೀಕರಿಸಲು ಇದುವರೆಗೆ ಇಲಾಖೆಗಳಾಗಲೀ, ಜನಪ್ರತಿನಿಧಿಗಳಾಗಲೀ ಸಹಕಾರ ನೀಡಿಲ್ಲ. ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ನೂರಾರು ಕುಟುಂಬಗಳು ಇಂದು ದಾಖಲೆಗಳನ್ನು ಪಡೆದುಕೊಂಡಿದ್ದರೂ ಈ ಕುಟುಂಬಕ್ಕೆ ಮಾತ್ರ ’94 ಸಿ’ ಭಾಗ್ಯವೂ ದೊರಕಿಲ್ಲ. ಹಾಗಾಗಿ ಈ ಕುಟುಂಬ ಅತಂತ್ರ ಸ್ಥಿತಿಯಲ್ಲೇ ಉಳಿಯುವಂತಾಗಿದೆ.
ಸರಕಾರದ ಸೌಲ್ಯಗಳನ್ನು ಬಳಸಿಕೊಂಡು ಸಾಕಷ್ಟು ಕುಟುಂಬಗಳು ಇಂದು ಸಮಾಜದ ಮುಖ್ಯವಾಹಿನಿಗೆ ಸೇರಿವೆ. ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಮತ್ತು ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳು ವಿಫಲವಾದ ಕಾರಣಕ್ಕೆ ಕೃಷ್ಣ ನಾಯ್ಕರಂತಹ ಕುಟುಂಬಗಳು ಮೂಲಸೌಕರ್ಯದಿಂದ ವಂಚಿತವಾಗಿವೆ.
ಆತಂಕದಲ್ಲಿ ಮೂರು ಜೀವಗಳು
ಕೂಲಿ ಕೆಲಸದ ಆದಾಯವನ್ನೇ ನಂಬಿಕೊಂಡು ಸಂಸಾರ ನಡೆಸುತ್ತಿರುವ ಕೃಷ್ಣ ನಾಯ್ಕ ಈ ಗುಡಿಸಲಿನಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕುತ್ತಿದ್ದಾರೆ. ಪ್ರತಿ ವರ್ಷವು ಯಾರದೋ ತೋಟದಿಂದ ಕಾಡಿ ಬೇಡಿ ತಂದು ಗುಡಿಸಲಿಗೆ ಸೋಗೆ ಹೊದಿಸುತ್ತಿದ್ದಾರೆ. ಮಳೆಗಾಲದಲ್ಲಿ ಆತಂಕದ ಸ್ಥಿತಿಯಲ್ಲೇ ಕಾಲಕಳೆಯುತ್ತಿದ್ದಾರೆ. ಈ ಮನೆಗೆ ಮೂಲಸೌಕರ್ಯಗಳಾದ ಶೌಚಾಲಯ, ಸ್ನಾನಗೃಹಗಳಿಲ್ಲ, ಪುತ್ತೂರು-ಬುಳೇರಿಕಟ್ಟೆ ಮುಖ್ಯರಸ್ತೆಯಿಂದ ಸಾಕಷ್ಟು ಒಳಪ್ರದೇಶದಲ್ಲಿರುವುದರಿಂದ ಸರಿಯಾದ ರಸ್ತೆ ಸಂಪರ್ಕವೂ ಇಲ್ಲ. ಡಾಂಬರು ಕಾಣದ ಕಚ್ಚಾರಸ್ತೆಯಲ್ಲಿ ಸಾಕಷ್ಟು ದೂರ ಕ್ರಮಿಸಬೇಕು. ಅರಣ್ಯ ಪ್ರದೇಶದ ನಡುವೆ ಹಾದು ಹೋಗುವ ರಸ್ತೆಯಾಗಿ ಮುಂದೆ ಕಾಲುದಾರಿಯಲ್ಲಿ ಸಾಗಬೇಕು.
ಈ ಎಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಈ ಕುಟುಂಬದ ಗುಡಿಸಲಿಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಪಡಿತರ ಚೀಡಿ ಮತ್ತು ವಿದ್ಯುತ್ ಬೆಳಕಿನ ಭಾಗ್ಯ ಮಾತ್ರ ಲಭಿಸಿದೆ. ಮಕ್ಕಳು ಸುಮಾರು 5 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಿ ಶಾಲೆಗೆ ಹೋಗುತ್ತಿದ್ದಾರೆ. ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಈ ಕುಟುಂಬದ ಬಳಿ ಹಕ್ಕು ಪತ್ರ ಇಲ್ಲ. ಮೀಸಲು ಅರಣ್ಯದ ಬಪರ್‌ನಲ್ಲಿ ಇವರ ಜಮೀನು ಇದೆ ಎಂದು ಮೇಲ್ನೋಟಕ್ಕೆ ಕಂಡುಕೊಂಡ ಅಧಿಕಾರಿಗಳು ಇದರ ಆಳಕ್ಕೆ ಇಳಿದು ನೋಡಿಲ್ಲ. ಯಾಕೆಂದರೆ ಈ ಜಮೀನು ಮೀಸಲು ಅರಣ್ಯದ ಗುಪ್ಪೆಯಿಂದ ಹೊರಗಿದೆ ಎಂದು ಉಪವಿಭಾಗ ಮಟ್ಟದ ಅರಣ್ಯ ಹಕ್ಕುಗಳ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಹೀಗಿದ್ದರೂ ಇವರಿಗೆ ಮನೆಯ ಭಾಗ್ಯ ದೊರೆತಿಲ್ಲ. 94ಸಿ ಅಡಿಯಲ್ಲಿ ಇವರಿಗೆ ಮನೆ ನೀಡಲು ಪ್ರಯತ್ನ ಪಡುತ್ತಿರುವುದಾಗಿ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನಯಾ ಹಾಗೂ ಅಭಿವೃದ್ಧಿ ಅಧಿಕಾರಿ ಶರೀಫ್ ಭರವಸೆ ನೀಡಿದ್ದು, ಈ ಕುಟುಂಬ ಇದಕ್ಕಾಗಿ ಕಾಯುತ್ತಿದೆ.
ಹಕ್ಕುಪತ್ರ ಸಿಕ್ಕರೆ ಅಷ್ಟೇ ಸಾಕು
ನಾವು ಈ ಜಾಗದಲ್ಲಿ ಕಳೆದ 21 ವರ್ಷಗಳಿಂದ ವಾಸ್ತವ್ಯ ಇದ್ದೇವೆ ಎನ್ನುವುದಕ್ಕೆ ನಾವು ನೆಟ್ಟು ಬೆಳೆಸಿದ ಎರಡು ತೆಂಗಿನ ಮರಗಳೇ ಸಾಕ್ಷಿ. ಅದು ಬಿಟ್ಟು ಬೇರೇನೂ ಸಾಕ್ಷಿ ನಮ್ಮಲ್ಲಿ ಇಲ್ಲ. ಪಡಿತರ ಚೀಟಿ, ವಿದ್ಯುತ್ ಇದೆ ಬಿಟ್ಟರೆ ಬೇರಾವ ಸವಲತ್ತೂ ನಮಗೆ ಸಿಕ್ಕಿಲ್ಲ. ಮನೆಯ ಹಕ್ಕುಪತ್ರಕ್ಕಾಗಿ ಹಲವು ಬಾರಿ ಅರ್ಜಿ ನೀಡಿದ್ದೇವೆ. ಮನೆಯೊಂದು ಕೊಡಿ ಎಂದು ಗೋಗರೆದಿದ್ದೇವೆ. ಆದರೆ ಇದುವರೆಗೆ ಯಾರೂ ಬೆಂಬಲ ಕೊಟ್ಟಿಲ್ಲ. ಹಕ್ಕುಪತ್ರ ಸಿಕ್ಕಿದರೆ ಒಂದು ಪುಟ್ಟ ಮನೆ ಕಟ್ಟಬೇಕು ಎನ್ನುವ ಕನಸಿದೆ.
ಕೃಷ್ಣ ನಾಯ್ಕ