ದ.ಕ.:ರಾಜ್ಯ ಸರಕಾರಿ ನೌಕರರ ಮುಷ್ಕರ ಪೂರ್ಣ ಯಶಸ್ವಿ
ಮಂಗಳೂರು, ಜೂ. 2: ಸಮಾನ ವೇತನಕ್ಕೆ ಆಗ್ರಹಿಸಿ ಗುರುವಾರ ರಾಜ್ಯ ಸರಕಾರಿ ನೌಕರರು ನಡೆಸಿದ ಮುಷ್ಕರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ನೌಕರರು ಇಂದು ಕಚೇರಿ ಕೆಲಸಗಳಿಗೆ ಹಾಜರಾಗಲಿಲ್ಲ. ಇದರಿಂದಾಗಿ ಸಾರ್ವಜನಿಕರು ಸರಕಾರಿ ಕಚೇರಿಗಳಲ್ಲಿ ದೈನಂದಿನ ಕೆಲಸಗಳು ನಡೆಯದೆ ತೊಂದರೆ ಅನುಭವಿಸಿದರು. ನಗರದ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಲೇಡಿಗೋಶನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಿಬ್ಬಂದಿ ಮಾತ್ರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದುದು ಕಂಡು ಬಂತು. ರಾಜ್ಯ ಸರಕಾರಿ ಇಲಾಖೆಗಳು ಎಂದಿನಂತೆ ಕಾರ್ಯನಿರ್ವಹಿಸದ ಕಾರಣ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಣ್ಣಪುಟ್ಟ ಕೆಲಸಗಳನ್ನು ನಡೆಸಲು ಸಹಕರಿಸಿದರು.
ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಮಂಗಳೂರು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪಾಲಿಕೆ ಸಿಬ್ಬಂದಿ ಕಚೇರಿ ಆರಂಭವಾಗುವ ಮೊದಲು ಬೆಳಗ್ಗೆ 9 ಗಂಟೆಯಿಂದ 10 ಗಂಟೆ ತನಕ ಕಚೇರಿಯ ಮುಖ್ಯ ದ್ವಾರದಲ್ಲಿ ಗೇಟ್ ಮೀಟಿಂಗ್ ನಡೆಸಿದರು. ಬಳಿಕ ಎಲ್ಲಾ ಸಿಬ್ಬಂದಿ ಕಪ್ಪು ಬ್ಲಾಡ್ಜ್ ಧರಿಸಿ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದರು.
ಅಭಿನಂದನೆ
ಕಚೇರಿ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಂದು ದಿನದ ಸಾಂಕೇತಿಕ ಮುಷ್ಕರವು ಸಂಪೂರ್ಣವಾಗಿ ಯಶಸ್ವಿಯಾಗಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ನೌಕರರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಅಭಿನಂದಿಸಿದ್ದಾರೆ.
ಮುಷ್ಕರಕ್ಕೆ ಬೆಂಬಲ ನೀಡಿದ ವಿವಿಧ ಸಂಘಟನೆಗಳಿಗೆ ಹಾಗೂ ಸಹಕರಿಸಿದ ಸಾರ್ವಜನಿಕರಿಗೆ ಅವರು ಪ್ರಕಟನೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.