×
Ad

ಕ್ಯಾನ್ಸರ್ ಶಾರೀರಿಕ ನ್ಯೂನ್ಯತೆಗಳಿಂದಲೇ ಸಾವನ್ನಪ್ಪುವ ರೋಗವಲ್ಲ: ಪ್ರೊ.ವಿದ್ಯಾಸಾಗರ್

Update: 2016-06-02 21:42 IST

ಕೊಣಾಜೆ, ಜೂ. 2: ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವಿಕೆಯಿಂದ ಸಂಪೂರ್ಣ ಗುಣಮುಖರನ್ನಾಗಿಸಲು ಸಾಧ್ಯ. ದೇಶದಲ್ಲಿ ಸರಿಯಾದ ಪತ್ತೆಹಚ್ಚುವಿಕೆ ಕಾರ್ಯಕ್ರಮಗಳಿಲ್ಲ. ಕ್ಯಾನ್ಸರ್ ಎಂಬುದು ಶಾರೀರಿಕ ನ್ಯೂನತೆಗಳಿಂದಲೇ ಸಾವನ್ನಪ್ಪುವ ರೋಗವಲ್ಲ, ಮಾನಸಿಕವಾಗಿಯೂ ಆಘಾತಕ್ಕೆ ಒಳಗಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯ ಅಗತ್ಯ ಇದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ವಿಭಾಗದ ಪ್ರೊ. ಡಾ. ವಿದ್ಯಾಸಾಗರ್ ಎಂ.ಎಸ್ ಅಭಿಪ್ರಾಯಪಟ್ಟಿದ್ದಾರೆ.

ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಆರಂಭಗೊಂಡ ಮೂಳೆ ಮಜ್ಜೆಯ ಕಸಿ ಸೌಲಭ್ಯವನ್ನು ಒಳಗೊಂಡ (ಬೋನ್ ಮೇರೊ ಟ್ರಾನ್ಸ್‌ಪ್ಲಾಂಟ್ ಫೆಸಿಲಿಟಿ) ಯೆನ್ ಆನ್ಕೋ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಾವಿನಿಂದ ಪಾರಾಗಬಹುದಾದ ಸ್ತನ ಕ್ಯಾನ್ಸರಿನ ಅರಿವಿಲ್ಲದೆ ವರ್ಷದಲ್ಲಿ ಹಲವು ಮಂದಿ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯ ಕುರಿತ ಸಂಸ್ಥೆಗಳು ಗ್ರಾಮೀಣ ಭಾಗಗಳಲ್ಲಿ ಕಾರ್ಯಾಚರಿಸುವ ಮೂಲಕ ಜನರಲ್ಲಿ ಜ್ಞಾನಾರ್ಜನೆ ಮೂಡಿಸುವ ಮೂಲಕ ಕಡಿಮೆ ವೆಚ್ಚದಲ್ಲೂ ರೋಗದ ಪತ್ತೆಹಚ್ಚುವಿಕೆ ಸಾಧ್ಯ ಅನ್ನುವುದನ್ನು ಮನದಟ್ಟು ಮಾಡಬೇಕಿದೆ. ಇದರಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಎಲ್ಲಾ ವಿಭಾಗಗಳು ಕಾರ್ಯಾಚರಿಸಬೇಕು.

ವೈದ್ಯರು ರೋಗಿಗಳಲ್ಲಿ ಉತ್ತಮ ಪ್ರೊಟೋಕಾಲ್ ಗಳನ್ನು ಬೆಳೆಸುವ ಮೂಲಕ ಅವರ ಕುಟುಂಬಸ್ಥರಲ್ಲಿ ಸಹಾನುಭೂತಿಯಿಂದ ವರ್ತಿಸಬೇಕಿದೆ. ಸಮಯವೇ ಇಲ್ಲದಂತೆ ವೈದ್ಯರೂ ವರ್ತಿಸಿದಲ್ಲಿ ದೇಶದಲ್ಲಿ ಕ್ಯಾನ್ಸರಿನಿಂದ ಸಾಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಹೋಗುತ್ತದೆ ಹೊರತು ಇಳಿಕೆಯಾಗುವುದಿಲ್ಲ. ತಂಬಾಕು ಸೇವಿಸುವವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಅದನ್ನು ಇಳಿಮುಖಗೊಳಿಸಸುವ ಪ್ರಯತ್ನದಲ್ಲಿ ಎಲ್ಲರೂ ಕಾರ್ಯಾಚರಿಸಬೇಕಿದೆ ಎಂದ ಅವರು ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಕ್ಯಾನ್ಸರ್ ತಪಾಸಣೆ ಸೆಂಟರ್ ಯೆನೆಪೋಯದಲ್ಲಿ ಆರಂಭಗೊಂಡಿರುವುದು ಶ್ಲಾಘನೀಯ ಎಂದರು.

ಯೆನ್ ಆನ್ಕೋ ಸೆಂಟರ್ ಅನ್ನು ಉದ್ಘಾಟಿಸಿದ ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಮಾತನಾಡಿ, ಯೆನೆಪೊಯ ವಿಶ್ವವಿದ್ಯಾನಿಲಯ ಕಳೆದ ಎಂಟು ತಿಂಗಳಿನಿಂದ ಕ್ಯಾನ್ಸರ್ ಕುರಿತ ಜಾಗೃತಿಯಲ್ಲಿ ಸಕ್ರಿಯವಾಗಿದೆ. ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಅಭಿವೃದ್ಧಿ ಹಾಗೂ ಸಂಶೋಧನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೆನೆಪೊಯ ಆಸ್ಪತ್ರೆಯಲ್ಲಿ ಆರಂಭವಾಗಿರುವ ಯೆನ್ ಆನ್ಕೋ ಸೆಂಟರ್‌ನಲ್ಲಿ ಬಡವರಿಗೆ ಉಚಿತವಾಗಿ ಹಾಗೂ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಪರಿಶೀಲನೆ ಹಾಗೂ ಚಿಕಿತ್ಸಾ ವಿಧಾನವನ್ನು ನಡೆಸಲಾಗುವುದು ಎಂದರು.

ಯೆನೆಪೊಯ ವಿ.ವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್, ಕುಲಸಚಿವ ಡಾ.ಸಿ.ವಿ.ರಘುವೀರ್, ಇಸ್ಲಾಮಿಕ್ ಎಜುಕೇಷನ್ ಟ್ರಸ್ಟಿನ ಟ್ರಸ್ಟಿ ಡಾ.ಅಖ್ತರ್ ಹುಸೈನ್, ಯೆನೆಪೊಯ ವೈದ್ಯಕೀಯ ಕಾಲೇಜಿನ ಡೀನ್ ಡಾ.ಗುಲಾಂ ಜೀಲಾನಿ ಖಾದಿರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News