ನದಿಯಲ್ಲಿ ಸ್ನಾನ ಮಾಡಿದ್ದಕ್ಕೆ ಹಲ್ಲೆ ನಡೆಸಿದರು, ಪೊಲೀಸರಿಗೆ ತಿಳಿಸದಂತೆ ದೇವಳದಲ್ಲಿ ಪ್ರಮಾಣ ಮಾಡಿಸಿದರು!
ಬೆಳ್ತಂಗಡಿ, ಜೂ.3: ಕಾಜೂರು ದರ್ಗಾಕ್ಕೆ ಹರಕೆ ಸಲ್ಲಿಸಲು ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಯಾತ್ರಾರ್ಥಿಗಳಾಗಿ ಬಂದಿದ್ದ ಐವರು ಮಕ್ಕಳು ಸೇರಿದಂತೆ ಆರು ಮಂದಿಗೆ ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಳೆಹೊನ್ನೂರು ಅಕ್ಷಯ ನಗರ ನಿವಾಸಿಗಳಾದ ಮುಹಮ್ಮದ್ ಮಿಸ್ಬಾಹ್(16), ಸೈಫುದ್ದೀನ್ (15), ನಿಝಾಮುದ್ದೀನ್(15), ರಾಹುದ್ದೀನ್(14), ಫಾಝಿಲ್(17) ಹಾಗೂ ಮುನಾಫ್(21) ತಂಡದಿಂದ ಹಲ್ಲೆಗೊಳಗಾದವರು. ಇವರು ಕಾಜೂರು ಕೊಲ್ಲಿಯಲ್ಲಿ ನೇತ್ರಾವತಿ ನದಿಗಿಳಿದಿದು ಸ್ನಾನ ಮಾಡುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಆರು ಮಂದಿ ಯಾತ್ರಾರ್ಥಿಗಳು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲ್ಲಿಗೆ ರಿಕ್ಷಾದಲ್ಲಿ (ಕೆ.ಎ.21.7738) ಬಂದ ಯುವಕರ ತಂಡ, ‘‘ದೇವರ ಗುಂಡಿಯಲ್ಲಿ ಸ್ನಾನ ಮಾಡುತ್ತಿದ್ದೀರಾ’’ ಎಂದು ಪ್ರಶ್ನಿಸಿ ಏಕಾಏಕಿ ಮಕ್ಕಳು ಹಾಗೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲು ಮತ್ತು ಕೈಯಿಂದ ಹಲ್ಲೆ ನಡೆಸಿದ ತಂಡ ಬಳಿಕ ಇವರನ್ನು ಸಮೀಪದಲ್ಲಿರುವ ಕೊಲ್ಲಿ ದೇವಸ್ಥಾನಕ್ಕೆ ಕರೆದೊಯ್ದಿದೆ. ಅಲ್ಲಿ ಹಲ್ಲೆಗೊಳಗಾದವರಿಂದ ತಪ್ಪುಕಾಣಿಕೆ ಹಾಕಿಸಿದ್ದಾರೆ ಹಾಗೂ ಈ ಬಗ್ಗೆ ಪೋಲೀಸರಿಗೆ ದೂರು ನೀಡದಂತೆ ಬೆದರಿಕೆಯೊಡ್ಡಿ ಪ್ರಮಾಣ ಮಾಡಿಸಿದ್ದಾರೆ ಎಂದು ಹಲ್ಲೆಗೊಳಗಾದವರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೆ ಒಳಗಾದವರು ಬಳಿಕ ಮರಳಿ ಕಾಜೂರು ದರ್ಗಾದ ಸಮೀಪ ಬಂದು ತಮ್ಮಂದಿಗೆ ಬಂದಿದ್ದವರಿಗೆ ಹಾಗೂ ಸ್ಥಳೀಯರಿಗೆ ಹಲ್ಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಹಲ್ಲೆಗೆ ಒಳಗಾದವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಮಕ್ಕಳು ಸ್ನಾನಕ್ಕೆ ಇಳಿದಿದ್ದ ಸ್ಥಳ ‘ದೇವರ ಗುಂಡಿ’ ಎಂದು ಕರೆಯುವ ಸ್ಥಳವಾಗಿದ್ದು, ಇಲ್ಲಿ ಕಟ್ಟೆಯೂ ಇದೆ. ಆದರೆ ಹೊರ ಜಿಲ್ಲೆಯ ಯಾತ್ರಾರ್ಥಿಗಳಿಗೆ ಈ ಬಗ್ಗೆ ತಿಳಿದಿರಲಿಲ್ಲ. ಅವರು ಸಾಮಾನ್ಯದಂತೆ ನದಿಗೆ ಇಳಿದಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ತಂಡ ಮಕ್ಕಳೆಂದೂ ಗಮನಿಸದೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ತಂಡದಲ್ಲಿದ್ದ ಇಬ್ಬರು ಯುವಕರು ಯತ್ರಾರ್ಥಿಗಳನ್ನು ಥಳಿಸಿದ್ದು, ಸೇರಿದ್ದ ಹತ್ತರಿಂದ ಹದಿನೈದು ಮಂದಿ ಇದನ್ನು ನೋಡುತ್ತಾ ಪ್ರೋತ್ಸಾಹಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯ ಘಟನೆಯ ಬಳಿಕ ಕಾಜೂರು ಕೊಲ್ಲಿ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಮ್ ರಾವ್ ಬೊರಸೆ, ಹಾಗೂ ಡಿವೈಎಸ್ಪಿ ಭಾಸ್ಕರ ರೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.