×
Ad

ಕಾಂಗ್ರೆಸ್‌ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆಯೇ?: ಸಿಎಂ ವಿರುದ್ಧ ಪೂಜಾರಿ ವಾಗ್ದಾಳಿ

Update: 2016-06-03 15:07 IST

ಮಂಗಳೂರು, ಜೂ.3: ಕರ್ನಾಟಕ ರಾಜ್ಯದ ಆರು ಲಕ್ಷ ಸರಕಾರಿ ನೌಕರರು ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನೆಗೆ ಇಳಿದಿರುವಾಗ ಸಮಿತಿ ರಚಿಸಿ ಅವರ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಪ್ರಯತ್ನಿಸಬೇಕಿತ್ತು. ಅದು ಬಿಟ್ಟು ಎಸ್ಮಾ ಜಾರಿಗೊಳಿಸುವುದು, ಪ್ರತಿಭಟನೆಗೆ ಕರೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸುವಂತಹ ಕ್ರಮಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಂದಿನ ಚುನಾವಣೆಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್‌ಮುಕ್ತ ಮಾಡಲು ಹೊರಟಿದ್ದಾರೆಯೇ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಕಟುವಾಗಿ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.
ಒಂದೆಡೆ ಸರಕಾರಿ ನೌಕರರು ಹಾಗೂ ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯನ್ನು ಕೆರಳಿಸುವ ಕೃತ್ಯ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಕಾಂಗ್ರೆಸ್‌ಮುಕ್ತ ಮಾಡಲು ಹೊರಟಿದ್ದರೆ, ಸಿದ್ದರಾಮಯ್ಯನವರ ನಡೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಹೊರಟಿರುವಂತಿದೆ. ಹೀಗಿರುವಾಗ ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯನರವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಆರೇಳು ವರ್ಷಗಳು ಮಾತ್ರ ಆಗಿವೆ. ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ ದೊರಕಿಸಿದ ಪಕ್ಷ. ಕಾರ್ಯಕರ್ತರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಕಾರ್ಯಕರ್ತರು ಅದಕ್ಕೆ ಪ್ರಾಣ ಹೋದರೂ ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷವನ್ನು ಗಟ್ಟಿ ಮಾಡುವ ಜವಾಬ್ದಾರಿ ಇದೆ. ಜನ ನೋಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕರ್ನಾಟಕದಲ್ಲಿ ಕಾರ್ಯಕರ್ತರು ನಿಮ್ಮನ್ನು ಮುಕ್ತಗೊಳಿಸಲಿದ್ದಾರೆ ಎಂದು ತೀಕ್ಷ್ಣವಾಗಿ ನುಡಿದರು.
‘‘ನಾನು ಬಹಳ ಕಠಿಣ ಶಬ್ದಗಳನ್ನು ಉಪಯೋಗಿಸುತ್ತಿದ್ದೇನೆ. ಆದರೆ ನಮಗೆ ಪಕ್ಷ ಹಾಗೂ ಜನರು ಮುಖ್ಯ. ನೀವು ಬರ್ತೀರಿ ಹೋಗುತ್ತೀರಿ’’ ಎಂದು ವ್ಯಂಗ್ಯವಾಗಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಪೂಜಾರಿ, ಸರಕಾರಿ ನೌಕರರ ಪದಾಧಿಕಾರಿಗಳನ್ನು ಕರೆದು ಸಮಾಲೋಚನೆ ಮಾಡುವ ಬದಲು ದುರಂಹಕಾರದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸರಕಾರಿ ನೌಕರರ ಪದಾಧಿಕಾರಿಗಳನ್ನು ಕರೆಸಿ ಸಭೆ ಮಾಡಿ, ವೇತನ ಹೆಚ್ಚಿಸಿ. ಪೊಲೀಸರ ವೇತನವನ್ನೂ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪ್ರತಿಭಟನೆಗೆ ಮುಂದಾದವರ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪೂಜಾರಿ, ಮುಖ್ಯಮಂತ್ರಿಗೆ ಭಾರತದ ಸಂವಿಧಾನದ ಬಗ್ಗೆ ಅರಿವಿಲ್ಲವೇ? ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕು ಇದೆ ಎಂದು ತಿಳಿದಿಲ್ಲವೇ? ಹಾಗಿದ್ದರೂ ರಾಜದ್ರೋಹ ಪ್ರಕರಣ ದಾಖಲಿಸಲು ರಾಜ್ಯದಲ್ಲಿ ಮಿಲಿಟರಿ ಆಡಳಿತವಿದೆಯೇ? ಅವರು ಸರ್ವಾಧಿಕಾರಿಯೇ ಎಂದು ಪ್ರಶ್ನಿಸಿದರು.
ರಾಜ್ಯ ಸಭಾ ಚುನಾವಣೆಗೆ ಸಂಬಂಧಿಸಿ ನಡೆದ ಕುಟುಕು ಕಾರ್ಯಾಚರಣೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೂದಾರಿ, ಇನ್ನು ಮುಂದೆ ಯಾರೂ ಚುನಾವಣೆಗೆ ನಿಲ್ಲಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕರಿಗೆ ಶಾಸಕರಾಗುವ ಅವಕಾಶ ಇಲ್ಲವಾಗಿದೆ. ಕರ್ನಾಟಕದ ಜನತೆ ತಲೆತಗ್ಗಿಸುವ ಕೆಲಸ ಇದು. ಮುಂದಿನ ದಿನಗಳಲ್ಲಿ ಶಾಸಕರು, ರಾಜಕಾರಣಿಗಳಿಗೆ ಯಾವುದೇ ಗೌರವ ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ಚಂದ್ರ, ಟಿ.ಕೆ. ಸುಧೀರ್, ಅಪ್ಪಿ, ಅಜಿತ್ ಕುಮಾರ್, ದೀಪಕ್ ಪೂಜಾರಿ, ಅರುಣ್ ಕುವೆಲ್ಲೋ, ರಮಾನಂದ, ರಮಾನಂದ ಪೂಜಾರಿ, ಕರುಣಾಕರ್ ಶೆಟ್ಟಿ, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News