×
Ad

ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಾಸಕ ಐವನ್ ಕರೆ

Update: 2016-06-03 15:12 IST

ಮಂಗಳೂರು, ಜೂ.3: ರಾಜ್ಯ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಅದರಲ್ಲೂ, ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರೆ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2016-17ನ ಸಾಲಿನಲ್ಲಿ 7,684 ಫಲಾನುಭವಿಗಳಿಗೆ ಶ್ರಮಶಕ್ತಿ, ಕಿರುಸಾಲ, ಅರಿವು, ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ, ಗಂಗಾಕಲ್ಯಾಣ ಹಾಗೂ ಸ್ವಾವಲಂಬನೆ ಯೋಜನೆಗಳಿಗೆ 2,174.80 ಲಕ್ಷ ರೂ.ಗಳ ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ವಿವಿಧ ಯೋಜನೆಯಡಿ ಸಹಾಯಕ ಮಾಡುವ ಯೋಜನೆಗಳಾದ ವಿದ್ಯಾಸಿರಿ, ಉತ್ತೇಜನ ಯೋಜನೆ, ಸಮುದಾಯ ಭವನ, ಶಾದಿಭಾಗ್ಯ, ಚರ್ಚ್‌ಗಳ ದುರಸ್ತಿ, ಸ್ಮಶಾನ ಆವರಣ ಗೋಡೆ, ಅಭಿವೃದ್ಧಿ, ಅನಾಥಾಶ್ರಮ, ವೃದ್ಧಾಶ್ರಮ, ಎಚ್‌ಐವಿ- ಏಡ್ಸ್- ವಿಕಲಚೇತನ ಸಂಸ್ಥೆಗಳಿಗೆ ಅನುದಾನ ನೀಡುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಅಲ್ಪಸಂಖ್ಯಾಕ ನಿರ್ದೇಶನಾಲಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತಾವನೆಯನ್ನು ಜು.30ರೊಳಗೆ ಸಲ್ಲಿಸಬೇಕಾಗಿದೆ ಎಂದವರು ಹೇಳಿದರು.

ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಶಿಕ್ಷಣ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೆರವು, ಸಹಾಯಧನ ಹಾಗೂ ವಿದೇಶ ವಿದ್ಯಾಭ್ಯಾಸಕ್ಕೆ ಸುಮಾರು 20 ಲಕ್ಷ ರೂ.ವರೆಗೆ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ಮಾಹಿತಿ ಕೊರತೆಯಿದ್ದು, ಅರ್ಹರಿಗೆ ಈ ಯೋಜನೆಗಳು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಾನು ಈಗಾಗಲೇ ನಡೆಸಿರುವುದಾಗಿ ಐವನ್ ತಿಳಿಸಿದರು. ರಾಜ್ಯ ಸರಕಾರವು 2016-17ನೆ ಸಾಲಿನ ಬಜೆಟ್‌ನಲ್ಲಿ 1,200 ಕೋ.ರೂ. ರಾಜ್ಯದ ಅಲ್ಪಸಂಖ್ಯಾತರಅಭಿವೃದ್ದಿ ನಿಗಮಕ್ಕೆ ಮೀಸಲಿಟ್ಟಿದ್ದು, 2015-16ನೆ ಸಾಲಿನಲ್ಲಿ 300 ಕೋ.ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ಅದರಲ್ಲೂ ರಾಜ್ಯದ ಕ್ರೈಸ್ತ ಅಭಿವೃದ್ಧಿಗೆ 125 ಕೋ.ರೂ.ವನ್ನು ಕ್ರೈಸ್ತ ಅಭಿವೃದ್ಧಿ ಪರಿಷತ್ತಿಗೆ ನೀಡಲಾಗಿದೆ.
ಜೂ.5ರಿಂದ ಜಿಲ್ಲೆಯ ಕೆಲವೆಡೆ ರಾಜ್ಯ ಸರಕಾರದ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಯೋಜನೆಯಡಿಯಲ್ಲಿ ಕ್ರೈಸ್ತ ಅಲ್ಪಸಂಖ್ಯಾಕ ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಜೂ.5ರಂದು ಬೆಳಗ್ಗೆ 9:30ಕ್ಕೆ ಅಶೋಕ ನಗರದ ಸಂತ ಡೊಮಿನಿಕ್ ಚರ್ಚ್, ಅಪರಾಹ್ನ 3 ಗಂಟೆಗೆ ಬೆಳ್ತಂಗಡಿಯ ಹೋಲಿ ರೆಡ್‌ಮೇಡ್ ಚರ್ಚ್, ಜೂ.19ರಂದು ಬೆಳಗ್ಗೆ 8:30ಕ್ಕೆ ಕಿನ್ನಿಗೋಳಿ ಕಿರೇಂ ಚರ್ಚ್ ಹಾಲ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐವನ್ ವಿವರಿಸಿದರು.

ಗ್ರಾಮಾಂತರ ಪೊಲೀಸ್ ಠಾಣೆಗೆ 5 ಲಕ್ಷ ರೂ.

 ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸೋರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 5 ಲಕ್ಷ ರೂ.ಗಳನ್ನು ತಮ್ಮ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಒದಗಿಸುವುದಾಗಿ ಐವನ್ ಭರವಸೆ ನೀಡಿದರು. ಮಾತ್ರವಲ್ಲದೆ ಕಟ್ಟಡದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಗೂ ಕ್ರಮ ಕೈಗೊಳ್ಳುವುದಾಗಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News