ಸ್ಮಾರ್ಟ್ ಸಿಟಿಗಾಗಿ ಮಂಗಳೂರಿನ ಹಳೆ ಬಂದರು, ಮೀನುಗಾರಿಕೆ ಅಭಿವೃದ್ಧಿ: ಶಾಸಕ ಲೋಬೊ
ಮಂಗಳೂರು, ಜೂ.3: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಪ್ರಥಮ 20ರ ಪಟ್ಟಿಯಲ್ಲಿ ವಂಚಿತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯೊಂದಿಗೆ ನಗರದ ಹಳೆ ಬಂದರು ಹಾಗೂ ಮೀನುಗಾರಿಕೆ ಅಭಿವೃದ್ಧಿಗೆ ಚಿಂತನೆ ಮಾಡಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ಮಾರ್ಟ್ ಸಿಟಿಯ ಮೊದಲ ಸುತ್ತಿನಲ್ಲಿ ಮಂಗಳೂರು ಆಯ್ಕೆಯಾಗದ ಬಗ್ಗೆ ನಿರಾಸೆ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮುಂಜಾಗರೂಕತೆಯೊಂದಿಗೆ ಹೆಜ್ಜೆ ಇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮಂಗಳೂರು ನಗರ ಆಗುವಲ್ಲಿ ಹಳೆ ಬಂದರು ಹಾಗೂ ಮೀನುಗಾರಿಕೆ ಅತೀ ಪ್ರಮುಖವಾಗಿದ್ದು, ಈ ಎರಡು ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆಲೋಚಿಸಲಾಗಿದೆ. ಪಾಶ್ಚಾತ್ಯರು ಭಾರತಕ್ಕೆ ಸಮುದ್ರಯಾನದ ಮೂಲಕ ಈ ನಗರದ ಮೂಲಕ ಆಗಮಿಸಿರುವ ಇತಿಹಾಸವೂ ಇದೆ. ಆದರೆ ಇಂದು ಲಕ್ಷದ್ವೀಪದ ಜತೆಗಿನ ವ್ಯಾಪಾರ ವಹಿವಾಟು ಕೂಡಾ ಕೇರಳಕ್ಕೆ ಹೋಗಿದೆ. ಶೇ. 80ರಷ್ಟು ವಾಣಿಜ್ಯ ಅಭಿವೃದ್ಧಿ ಹಳೆ ಬಂದರಿನಿಂದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಹಳೆ ಬಂದರು ಹಾಗೂ ಮೀನುಗಾರಿಕೆಯನ್ನು ಆಧುನೀಕರಣಗೊಳಿಸಬೇಕಾಗಿದೆ. ನಗರದ ಮಾರಕುಟ್ಟೆಗಳನ್ನು ಆಧುನೀಕರಣಗೊಳಿಸಿ, ಬಂದರಿಗೆ ಸಮರ್ಪಕ ರಸ್ತೆ ಸಂಪರ್ಕಗಳನ್ನು ಒದಗಿಸಬೇಕು. ಈ ಮೂಲಕ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಬಂದರು ಅಭಿವೃದ್ಧಿ ಕುರಿತಂತೆ ಈಗಾಗಲೇ ಲಕ್ಷದ್ವೀಪ ಸರಕಾರ 70 ಕೋಟಿ ರೂ.ಗಳ ಬಂಡವಾಳ ಹೂಡಲು ಮುಂದೆ ಬಂದಿದೆ. ಒಪ್ಪಂದವೂ ನಡೆದಿದ್ದು, ಅಲ್ಲಿನ ಸರಕಾರದ ಅಧಿಕಾರಿಗಳ ಜತೆ ತಾನು ಸಂಪರ್ಕದಲ್ಲಿಯೂ ಇರುವುದಾಗಿ ಅವರು ಹೇಳಿದರು. ಲಕ್ಷದ್ವೀಪದ ಜತೆಗಿನ ವ್ಯಾಪಾರ ತಪ್ಪಿಹೋಗಲು ನಮ್ಮ ಬಂದರು ಇಲಾಖೆಯ ನಿರುತ್ಸಾಹವೇ ಮುಖ್ಯ ಕಾರಣ ಎಂದು ಲೋಬೊ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಲ್ಯಾನ್ಸಿ ಲೋಟ್ ಪಿಂಟೊ, ಅಪ್ಪಿಲತಾ, ವಿನಯ್‌ರಾಜ್, ಕಾಂಗ್ರೆಸ್ ಮುಖಂಡರಾದ ಡೆನ್ನಿಸ್ ಡಿಸಿಲ್ವಾ, ಅರುಣ್ ಕುವೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.