×
Ad

ಉಪ್ಪಿನಂಗಡಿ: ಸಿಡಿಲು ಬಡಿದು ನಾಲ್ವರಿಗೆ ಗಂಭೀರ ಗಾಯ

Update: 2016-06-03 16:42 IST

ಉಪ್ಪಿನಂಗಡಿ, ಜೂ. 3: ಸಿಡಿಲು ಬಡಿದು ನಾಲ್ವರು ಗಂಭೀರ ಗಾಯಗೊಂಡ ಘಟನೆ 34ನೆ ನೆಕ್ಕಿಲಾಡಿಯ ಶಾಂತಿನಗರದ ಪರನೀರು ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ಘಟನೆಯಿಂದ ಅವರ ವಾಸದ ಮನೆ ಭಾಗಶಃ ಹಾನಿಗೀಡಾಗಿದೆ.

ಇಲ್ಲಿನ ತನಿಯ ಮುಗೇರ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಘಟನೆಯಿಂದ ತನಿಯ ಮುಗೇರ ಅವರ ಮಕ್ಕಳಾದ ಪವಿತ್ರಾ (19), ಗಣೇಶ (28), ಸತೀಶ (25) ಹಾಗೂ ಸಚಿನ್ (23) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಸಿಡಿಲು ಬಡಿದಿದ್ದರಿಂದ ಮನೆಯ ಮಾಡಿಗೆ ಸಂಪೂರ್ಣ ಹಾನಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದೆ.

ಗುರುವಾರ ಸಂಜೆ ಉಪ್ಪಿನಂಗಡಿ, 34ನೆ ನೆಕ್ಕಿಲಾಡಿ ಸುತ್ತಮುತ್ತ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಈ ಸಂದರ್ಭ ಈ ದುರ್ಘಟನೆ ನಡೆದಿದೆ. ತನಿಯ ಮುಗೇರ ಅವರ ಮನೆ ಸಮೀಪವಿದ್ದ ತೆಂಗಿನ ಮರಕ್ಕೆ ಬಡಿದ ಸಿಡಿಲು ಮನೆಗೂ ಹಾನಿಯೆಸಗಿದೆ. ಇವರದ್ದು ಹಂಚಿನ ಮನೆಯಾಗಿದ್ದು, ಮಾಡು ಸಂಪೂರ್ಣ ನಾಶಗೊಂಡಿದೆ. ಈ ಸಂದರ್ಭ ಮನೆಯಲ್ಲಿ ತನಿಯ ಮುಗೇರರ ಪತ್ನಿ ಯಮುನಾ, ಆರು ಮಂದಿ ಮಕ್ಕಳು ಹಾಗೂ ಸಣ್ಣ ಪ್ರಾಯದ ಮೊಮ್ಮಗು ಸಹಿತ ಒಟ್ಟು ಎಂಟು ಮಂದಿ ಇದ್ದರು. ಅದೃಷ್ಟವಶಾತ್ 4 ಜನರಿಗೆ ಮಾತ್ರ ಗಾಯವಾಗಿ ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಕರೆತಂದು ಬಳಿಕ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಡಿಲ ಬಡಿತದಿಂದ ಮನೆಯ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದ್ದು, ವಿದ್ಯುತ್ ಮೈನ್ ಸ್ವಿಚ್ ಬೋರ್ಡ್ ಸುಮಾರು ನೂರು ಮೀಟರ್‌ನಷ್ಟು ದೂರ ಹೋಗಿ ಬಿದ್ದಿದೆ.

ಇವರ ಮನೆಯ ಮಾಡು ಸಂಪೂರ್ಣ ನಾಶವಾಗಿದ್ದರಿಂದ ಇವರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಿಕೊಡಲು 34ನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮುಂದಾಗಿದ್ದು, ಗುರುವಾರ ರಾತ್ರಿ ಈ ಕುಟುಂಬವನ್ನು ಸ್ಥಳೀಯ ಮನೆಗೆ ಸ್ಥಳಾಂತರಿಸಿದೆ ಹಾಗೂ ಹಾನಿಯಾಗಿರುವ ಈ ಕುಟುಂಬದ ಮನೆಯನ್ನು ಪಂಚಾಯತ್ ವತಿಯಿಂದ ಶುಕ್ರವಾರದಂದು ದುರಸ್ತಿಗೊಳಿಸಲು ತೀರ್ಮಾನಿಸಿದೆ. ಘಟನೆಯ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ 34ನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಸ್ಕರ್ ಅಲಿ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News