×
Ad

ಪುತ್ತೂರು: ಜೂ.20ರೊಳಗೆ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಿಇಒ ಸೂಚನೆ

Update: 2016-06-03 17:34 IST

ಪುತ್ತೂರು, ಜೂ. 3; ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಜೂ.20ರ ಒಳಗಾಗಿ ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರಿ ವಿದ್ಯಾ ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಮಾಹಿತಿ ಪಡೆದುಕೊಂಡ ಅವರು ಈ ಸೂಚನೆ ನೀಡಿದರು. ಈ ಗಡುವು ಮೀರದಂತೆ ಮುಗಿಸಿಕೊಡುವ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಗ್ರಾ.ಪಂ.ಗಳಿಗೆ ಅನುದಾನ ಹಂಚಿಕೆ, ಕಾಮಗಾರಿಯ ಪ್ರಗತಿಯ ಕುರಿತು ಪ್ರತಿ ಗ್ರಾ.ಪಂ.ಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಖರ್ಚಾಗದಿರುವ ಅನುದಾನವನ್ನು ವಾಪಾಸು ಮಾಡುವಂತೆ, ಖರ್ಚಾದ ಸ್ಟೇಟ್‌ಮೆಂಟ್ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ಹಲವು ಗ್ರಾ.ಪಂ. ಗಳು ಈ ಪ್ರಕ್ರಿಯೆಯನ್ನು ನಡೆಸಿಲ್ಲ. ಶನಿವಾರ ಸಂಜೆಯ ಒಳಗಡೆ ಬಾಕಿ ಉಳಿಕೆ ಹಣವನ್ನು ವಾಪಸು ಮಾಡಬೇಕು ಎಂದು ಸೂಚಿಸಿದರು. ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮಾತನಾಡಿ, ಅನುದಾನಗಳ ಪ್ರಗತಿಯ ಕುರಿತಂತೆ ಆಡಿಟ್ ಇರುವುದರಿಂದ ಉಳಿಕೆ ಅನುದಾನವನ್ನು ವಾಪಸು ನೀಡಬೇಕಾಗುತ್ತದೆ. ಶೌಚಾಲಯಗಳ ಕುರಿತಂತೆ ಮತ್ತೆ ಬೇಡಿಕೆ ಬಂದರೆ ಆಕ್ಷನ್ ಪ್ಲಾನ್ ಮೇಲೆ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಆರ್ಯಾಪು ಗ್ರಾ.ಪಂನಲ್ಲಿ 42 ಮನೆಗಳಿಗೆ, ಬಡಗನ್ನೂರು ಗ್ರಾ.ಪಂ. ನಲ್ಲಿ 25 ಮನೆಗಳಿಗೆ, ಅರಿಯಡ್ಕ ಗ್ರಾ.ಪಂ.ನಲ್ಲಿ 99 ಮನೆಗಳಿಗೆ ಶೌಚಾಲಯದ ಬೇಡಿಕೆಗಳಿರುವ ಬಗ್ಗೆ ಪಿಡಿಒ ಮತ್ತು ಕಾರ್ಯದರ್ಶಿಗಳು ಮಾಹಿತಿ ನೀಡಿದರು. ಮಾಹಿತಿ ಪಡೆದ ಶ್ರೀ ವಿದ್ಯಾ, ಬೇಡಿಕೆಗಳ ಕುರಿತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೈಜ ಫಲಾನುಭವಿಗಳನ್ನು ಗುರುತಿಸುವಂತೆ ತಿಳಿಸಿದರು. ಜೂ.22ರಂದು ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದ ಅವರು ಆಗ ಎಲ್ಲಾ ಬೇಡಿಕೆಗಳ ಶೌಚಾಲಯ ಕಾಮಗಾರಿಯೂ ಮುಗಿದಿರಬೇಕು ಎಂದು ಹೇಳಿದರು.

ಸಾರ್ವಜನಿಕ ಬೇಡಿಕೆ ಇರುವಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ಜಿ.ಪಂ.ಗೆ ಕಳುಹಿಸಬೇಕು. ಅಂತಹ ಸಂದರ್ಭದಲ್ಲಿ ಜಿ.ಪಂ.ನಿಂದ ಆದ್ಯತೆಯ ಮೇರೆಗೆ ಪರಿಗಣಿಸಿ ಶೌಚಾಲಯ ನಿರ್ಮಿಸಲಾಗುವುದು ಎಂದು ತಿಳಿಸಿದರು. ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಲ್ಲಿಯೂ ಚರಂಡಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುವಂತೆ ಸೂಚಿಸಿದ ಅವರು ಸ್ವಚ್ಛತೆಯಲ್ಲಿ ಜಿಲ್ಲೆಯನ್ನು ಮಾದರಿ ಮಾಡುವಂತೆ ತಿಳಿಸಿದರು. ಗುಜರಿ ಅಂಗಡಿಗಳನ್ನು ಸ್ವಚ್ಛಗೊಳಿಸುವ, ಟಯರ್‌ಗಳನ್ನು ಸ್ವಚ್ಛಗೊಳಿಸುವ ಸೇರಿದಂತೆ ರೋಗಗಳು ಹರಡದಂತೆ ಎಲ್ಲಾ ಕ್ರಮಗಳನ್ನು ತತ್‌ಕ್ಷಣ ಕೈಗೊಳ್ಳಬೇಕು. ಕೆಲಸಗಳ ಕುರಿತ ವರದಿಯನ್ನು ತಾ.ಪಂ. ಇಒ ಮೂಲಕ ಫೋಟೊ ಸಮೇತ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಇದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಮಂಜೂರಾದ ತಾಜ್ಯ ವಿಲೇವಾರಿ ಘಟಕಗಳ ಪ್ರಗತಿಯ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಪುತ್ತೂರು ತಾಲೂಕಿನ ಕಡಬ, ಕೊಳ್ತಿಗೆ, ಆಲಂಕಾರು, ಮರ್ಧಾಳ, ಸವಣೂರು, ಕೌಕ್ರಾಡಿ, ನೆಲ್ಯಾಡಿ ಸೇರಿದಂತೆ 7 ಕಡೆಗಳಿಗೆ ತಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರಾಗಿದ್ದರೂ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ. ಮರ್ಧಾಳದಲ್ಲಿ ಮಾತ್ರ ಕಾಮಗಾರಿ ಆರಂಭಗೊಂಡಿದೆ.

ಈ ಹಿಂದೆ ಉಪ್ಪಿನಂಗಡಿಯಲ್ಲಿ ಮಾತ್ರ ತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪೂರ್ಣಗೊಂಡು ಪ್ರಯೋಜನಕ್ಕೆ ಲಭ್ಯವಾಗುತ್ತಿದೆ. ಸುಳ್ತ ತಾಲೂಕಿನ ಐವರ್ನಾಡು, ಕನಕಮಜಲು, ಪಂಜ, ಜಾಲ್ಸೂರುಗಳಲ್ಲಿಯೂ ತಾಜ್ಯ ವಿಲೇವಾರಿ ಘಟಕ ಆರಂಭಿಸಲು ಮಂಜೂರಾತಿ ದೊರೆತಿದ್ದರೂ ವಿವಿಧ ಕಾರಣಗಳಿಂದ ಕಾಮಗಾರಿ ಆರಂಭವಾಗಿಲ್ಲ. ಇದೀಗ ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ, ಅರಿಯಡ್ಕ, ನೆಟ್ಟಣಿಗೆ ಮುಡ್ನೂರು, ಹಿರೆಬಂಡಾಡಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಡಿಕೆ ಇದೆ. ಮಂಜೂರಾದ ಕಡೆಗಳಲ್ಲಿ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಎರಡೂ ತಾಲೂಕುಗಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಯವರ ಮೂಲಕ ಅನುದಾನಗಳ, ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆಯಲಾಯಿತು. ಶೌಚಾಲಯಗಳ ಬೇಡಿಕೆ ಪಟ್ಟಿಯ ಮಾಹಿತಿ ಪಡೆದುಕೊಳ್ಳಲಾಯಿತು.

ಜಿ.ಪಂ. ನೆರವು ಘಟಕ ಮೇಲ್ವಿಚಾರಕಿ ಮಂಜುಳಾ, ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News