×
Ad

ಬ್ಯಾಂಕ್ ಖಾತೆಗಳೊಂದಿಗೆ ಆಧಾರ ಜೋಡಣೆ: ಪಿಂಚಣಿದಾರರಿಗೆ ಆದ್ಯತೆಗೆ ಬ್ಯಾಂಕುಗಳಿಗೆ ಸೂಚನೆ

Update: 2016-06-03 18:15 IST

ಹೊಸದಿಲ್ಲಿ,ಜೂ.3: ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ಆಧಾರ ಸಂಖ್ಯೆಯ ಜೋಡಣೆಗಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಪಿಂಚಣಿದಾರರಿಗೆ ಆದ್ಯತೆಯನ್ನು ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸಹಾಯಕ ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ದೇಶಾದ್ಯಂತ ಪಿಂಚಣಿ ವಿತರಣೆ ಬ್ಯಾಂಕುಗಳು ಮತ್ತು ಅವುಗಳ ಶಾಖೆಗಳಲ್ಲಿ ಪಿಂಚಣಿದಾರರ ಖಾತೆಗಳಲ್ಲಿ ಆಧಾರ ಸಂಖ್ಯೆಗಳನ್ನು ದಾಖಲಿಸಲು ಜೂ.10ರವರೆಗೆ ವಿಶೇಷ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದ ಅವರು ,ಪಿಂಚಣಿದಾರರು ಸುಗಮ ಆಧಾರ ಸಂಖ್ಯೆ ಜೋಡಣೆಗಾಗಿ ಪಿಂಚಣಿ ಪಾವತಿ ಆದೇಶ(ಪಿಪಿಒ),ಆಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಪುಸ್ತಕದೊಂದಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ಎಲ್ಲ ಪಿಂಚಣಿದಾರರು ‘ಜೀವನ ಪ್ರಮಾಣ’ಸೌಲಭ್ಯವನ್ನು ಪಡೆದುಕೊಳ್ಳುವಂತಾಗಲು ಆಧಾರ ಸಂಖ್ಯೆ,ಪಿಪಿಒ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡುವಂತೆ ಪಿಂಚಣಿದಾರರು ಮತ್ತು ಬ್ಯಾಂಕ್ ಶಾಖೆಗಳಿಗೆ ಅರಿವು ಮೂಡಿಸಲು ಸರಕಾರ ಮತ್ತು ಪಿಂಚಣಿ ವಿತರಣೆ ಬ್ಯಾಂಕುಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ.

ಜೀವನ ಪ್ರಮಾಣ ವಯಸ್ಸಾದ ಮತ್ತು ಅಶಕ್ತ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರ ಅನುಕೂಲಕ್ಕಾಗಿ ಸಿಬ್ಬಂದಿ ಮತ್ತು ಪಿಂಚಣಿ ಇಲಾಖೆಯು ಆರಂಭಿಸಿರುವ ಉಪಕ್ರಮವಾಗಿದೆ. ಇದರನ್ವಯ ಪಿಂಚಣಿದಾರರು ತಮ್ಮ ಮನೆಗಳಿಂದ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಅಥವಾ ತಮಗೆ ಹತ್ತಿರವಿರುವ ಸಾಮಾನ್ಯ ಸೇವಾ ಕೇಂದ್ರ ಅಥವಾ ಯಾವುದೇ ಪಿಂಚಣಿ ವಿತರಣೆ ಬ್ಯಾಂಕಿನ ತಮ್ಮ ಹತ್ತಿರದ ಶಾಖೆಗೆ ತೆರಳಿ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬಹುದಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News