ಮುಡಿಪು ಸರಕಾರಿ ಕಾಲೇಜಿಗೆ ಇನ್ಫೊಸಿಸ್‌ನಿಂದ ಆಧುನಿಕ ಶೌಚಾಲಯ: ಜೂ.9ರಂದು ಉದ್ಘಾಟನೆ
ಕೊಣಾಜೆ, ಜೂ.9: ಮುಡಿಪುವಿನಲ್ಲಿರುವ ಕುರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇನ್ಫೋಸಿಸ್ ಸಂಸ್ಥೆಯವರ ಸಹಕಾರದಿಂದ ಸರಕಾರಿ ಕಾಲೇಜಿನಲ್ಲಿ ಹಸಿರು ಗಾರ್ಡನ್‌ನೊಂದಿಗೆ ಆಧುನಿಕ ಸೌಲಭ್ಯದ ಶೌಚಾಲಯವು ನಿರ್ಮಾಣಗೊಂಡಿದ್ದು, ಇದರ ಉದ್ಘಾಟನೆಯು ಜೂ.9ರಂದು ನಡೆಯಲಿದೆ.
ಗ್ರಾಮೀಣ ಪ್ರದೇಶವಾಗಿರುವ ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ವ್ಯವಸ್ಥಿತವಾದ ಶೌಚಾಲಯ ಇಲ್ಲದೇ ಇದ್ದ ಕಾರಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಕಷ್ಟವನ್ನು ಎದುರಿಸುತ್ತಿದ್ದರು. ಇತ್ತೀಚೆಗೆ ಈ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿರುವಂತೆಯೇ ಇಲ್ಲಿ ಶೌಚಾಲಯದ ಸಮಸ್ಯೆ ಗಂಭೀರವಾಗಿತ್ತು.
ಶೌಚಾಲಯದ ಸಮಸ್ಯೆಯ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಅಧ್ಯಾಪಕರು ನಾನಾ ಇಲಾಖೆಗಳಿಗೂ ಮನದಟ್ಟು ಮಾಡಿ ಬೇಡಿಕೆಯನ್ನೂ ಇಟ್ಟಿದ್ದರು. ಇದೀಗ ಕಾಲೇಜಿನ ಪ್ರಮುಖ ಬೇಡಿಕೆಯಾದ ಶೌಚಾಲಯದ ಸಮಸ್ಯೆಗೆ ಸಚಿವ ಯು.ಟಿ.ಖಾದರ್‌ರ ಸಲಹೆ ಮೇರೆಗೆ ಸಮೀಪದ ಪ್ರತಿಷ್ಠಿತ ಇನ್ಫೊಸಿಸ್ ಸಂಸ್ಥೆಯು ಸ್ಪಂದಿಸಿ, ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಆಧುನಿಕ ತಂತ್ರಜ್ಞಾನದ ಸೌಲಭ್ಯದೊಂದಿಗೆ ಮಾದರಿ ಶೌಚಾಲಯ, ಗಾರ್ಡನ್ ನಿರ್ಮಿಸಿಕೊಟ್ಟಿದ್ದಾರೆ.
ಆಧುನಿಕ ಶೌಚಾಲಯದಲ್ಲಿ ಹ್ಯಾಂಡ್ ಡ್ರೈಯರ್, ಹ್ಯಾಂಡ್‌ವಾಶ್‌ಗೆ ಪ್ರತ್ಯೇಕ ವ್ಯವಸ್ಥೆ, ಉದ್ದಗಲದ ಕನ್ನಡಿಗಳು, ಹಾಗೆಯೇ ಶೌಚಾಲಯದೊಳಗೆ ನೀರು ಬಳಕೆಗೂ ಆಧುನಿಕತೆಯನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ವಿದ್ಯಾರ್ಥಿನಿಲಯರ ಶೌಚಾಲಯದಲ್ಲಿ ಎಲೆಕ್ಟ್ರಿಕ್ ನಾಪ್ಕಿನ್ ಬರ್ನರ್ ಯಂತ್ರವನ್ನು ಜೋಡಿಸಲಾಗಿದೆ. ಶೌಚಾಲಯದ ನಿರ್ಮಾಣದ ಜೊತೆಗೆ ಇದರ ಸುತ್ತ ಶಾಲೆಯ ಪರಿಸರದಲ್ಲಿ ಹಸಿರು ಹೊದಿಕೆಯೊಂದಿಗೆ ಆಕರ್ಷಕ ಗಾರ್ಡನ್ ಕೂಡಾ ನಿರ್ಮಾಣಗೊಂಡಿದೆ.
ಒಟ್ಟಿನಲ್ಲಿ ಕಳೆದ ಹಲವಾರು ವರ್ಷಗಳ ಬೇಡಿಕೆಯಂತೆ ಇದೀಗ ಇನ್ಫೊಸಿಸ್ ಸಹಕಾರದೊಂದಿಗೆ ಆಧುನಿಕ ಶೌಚಾಲಯದೊಂದಿಗೆ ಗಾರ್ಡನ್ ಕೂಡಾ ನಿರ್ಮಾಣಗೊಂಡಿರುವುದು ಕಾಲೇಜು ವಿದ್ಯಾರ್ಥಿಗಳಲ್ಲಿ ಸಂತಸವನ್ನುಂಟು ಮಾಡಿದೆ.