ಜೂ.4 ರ ಸಂಜೆಯೊಳಗೆ 4.75 ಕೋ.ರೂ.ಪಾವತಿಸುವಂತೆ ರವಿಶಂಕರರ ಎಒಎಲ್‌ಗೆ ಎನ್‌ಜಿಟಿ ಆದೇಶ

Update: 2016-06-03 16:44 GMT

ಹೊಸದಿಲ್ಲಿ,ಜೂ.3: ಮಾರ್ಚ್‌ನಲ್ಲಿ ತಾನು ಆಯೋಜಿಸಿದ್ದ ‘ವಿಶ್ವ ಸಂಸ್ಕೃತಿ ಉತ್ಸವ’ದ ಸಂದರ್ಭದಲ್ಲಿ ಯಮುನಾ ನದಿಯ ಜೀವವೈವಿಧ್ಯತೆಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ದಂಡದ ರೂಪದಲ್ಲಿ ವಿಧಿಸಲಾಗಿದ್ದ ಐದು ಕೋ.ರೂ.ಪರಿಸರ ಪರಿಹಾರದ ಬಾಕಿ 4.75 ಕೋ.ರೂ.ಗಳನ್ನು ಶನಿವಾರದೊಳಗೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ದಲ್ಲಿ ಠೇವಣಿಯಿರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಇಂದು ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನಕ್ಕೆ ತಾಕೀತು ಮಾಡಿದೆ.

ಜೂ.10ರೊಳಗೆ ಉತ್ಸವ ನಡೆದಿದ್ದ ಯಮುನಾ ನದಿಯ ತೀರಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಜುಲೈ 4ರೊಳಗೆ ‘ಸಂಪೂರ್ಣ ಮತ್ತು ಸಮಗ್ರ’ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತರ್ ಕುಮಾರ್ ನೇತೃತ್ವದ ರಜಾಕಾಲದ ಪೀಠವು ಜಲ ಸಂಪನ್ಮೂಲಗಳ ಸಚಿವಾಲಯದ ಕಾರ್ಯದರ್ಶಿ ಶಶಿ ಕುಮಾರ ನೇತೃತ್ವದ ತಜ್ಞರ ಸಮಿತಿಗೆ ಸೂಚಿಸಿತು.

 ಮಾ.11ರಿಂದ 13ರವರೆಗೆ ಎಒಎಲ್ ಆಯೋಜಿಸಿದ್ದ ಉತ್ಸವನ್ನು ನಿಷೇಧಿಸಲು ಮಾ.9ರಂದು ನಿರಾಕರಿಸಿದ್ದ ಎನ್‌ಜಿಟಿಯು,ಯಮುನಾ ನದಿಯ ಜೀವವೈವಿಧ್ಯತೆ ಮತ್ತು ಜಲಚರಗಳ ಜೀವನಕ್ಕೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಐದು ಕೋಟಿ ರೂ.ಪರಿಹಾರವನ್ನು ಪಾವತಿಸುವಂತೆ ಸೂಚಿಸಿತ್ತು. ಹಣವನ್ನು ಪಾವತಿಸಲು ನಾಲ್ಕು ವಾರಗಳ ಸಮಯಾವಕಾಶ ಕೋರಿ ಎಒಎಲ್ ಮಾ.11ರಂದು ಅರ್ಜಿ ಸಲ್ಲಿಸಿತ್ತು. ಅಂದು 25ಲ.ರೂ.ಗಳನ್ನು ಪಾವತಿಸಲು ಅದಕ್ಕೆ ಅನುಮತಿ ನೀಡಿದ್ದ ಎನ್‌ಜಿಟಿ ಬಾಕಿ ಹಣವನ್ನು ಪಾವತಿಸಲು ಮೂರು ವಾರಗಳ ಗಡುವು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News