ಜೂ.6ರೊಳಗೆ ಆರ್‌ಟಿಇ ಕಾಯ್ದೆ ಸರಿಪಡಿಸದಿದ್ದರೆ ಬಿಇಓ ಕಚೇರಿಗೆ ಬೀಗ: ಬಾಳ್ಳುಗೋಪಾಲ್ ಎಚ್ಚರಿಕೆ
ಹಾಸನ, ಜೂ.9: ಆರ್‌ಟಿಇ ಕಾಯ್ದೆಯನ್ನು ಜೂ.6ರೊಳಗೆ ಸರಿಪಡಿಸದಿದ್ದರೆ ಬಿಓ ಕಚೇರಿಗೆ ಬೀಗ ಹಾಕಿ ಉಗ್ರ ಹೊರಾಟ ಮಾಡುವುದಾಗಿ ಡಾ. ರಾಜಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಬಾಳ್ಳುಗೋಪಾಲ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಈಗಾಗಲೇ ಅನುಷ್ಠಾನಕ್ಕೆ ತರಲಾಗಿದ್ದರೂ ಸಹಾ ಇಚ್ಛಾಶಕ್ತಿ ಕೊರತೆಯಿಂದ ಕಾನೂನಿನ ಆಶಯದಂತೆ ದಲಿತರು, ಬಡವರು ಮತ್ತು ಹಿಂದುಳಿದ ಮಕ್ಕಳಿಗೆ ತಲುಪಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಆರ್‌ಟಿಇ ಅಡಿಯಲ್ಲಿ ಫಲಾನುಭವಿಯಾಗಲು ಶಾಲೆಗಳಿರುವ ವ್ಯಾಪ್ತಿಯಲ್ಲೇ ವಾಸವಿರಬೇಕು ಎಂಬ ನಿರ್ಬಂಧ ಹೇರಿದ್ದು, ಅರ್ಹ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ವ್ಯವಸ್ಥಿತ ಶಾಲೆಗಳು ಶ್ರೀಮಂತರು ವಾಸಿಸುವ ಸ್ಥಳಗಳಲ್ಲಿ ಶಾಲೆಯನ್ನು ತೆರೆಯುತ್ತಿರುವುದರಿಂದ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಅಧಿಕಾರಿಗಳು ಆಯ್ಕೆಯಾದ ಶಾಲೆಯ ಹೆಸರನ್ನು ತಿಳಿಸಿ ಸೇರಲು ಸೂಚಿಸಿದರೂ ಸಹ ಶಾಲಾ ಆಡಳಿತ ಮಂಡಳಿ ಇಲ್ಲಸಲ್ಲದ ಕಾರಣ ಹೇಳಿ ತಿರಸ್ಕರಿಸುತ್ತಿದೆ. ಇದರಲ್ಲಿ ಶಾಲಾ ಆಡಳಿತ ಮಂಡಳಿಯ ಜೊತೆ ಶಿಕ್ಷಣ ಇಲಾಖೆಯ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ಶಾಮೀಲಾಗಿ ಆರ್‌ಟಿಇ ಯೋಜನೆಯನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಶಿಕ್ಷಣ ಸಚಿವರು ಕೂಡಲೇ ಗಮನಹರಿಸಿ ಅಧಿಕಾರಿಗಳಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ ಅರ್ಹ ಮಕ್ಕಳಿಗೆ ಆರ್‌ಟಿಇ ಯೋಜನೆಯಡಿಯಲ್ಲಿ ಸ್ಥಳಾವಕಾಶ ದೊರಕಿಸಿಕೊಡಲು ಆಗ್ರಹಿಸಿದರು.
ಸಕಲೇಶಪುರ ತಾಲೂಕಿನ ಬಾಗೇಯಲ್ಲಿರುವ ಜೆಎಸ್‌ಎಸ್ ಶಾಲೆಯಲ್ಲಿ 19 ಸೀಟು ಆರ್‌ಟಿಇ ಅಡಿಯಲ್ಲಿ ನೀಡಲು ಆದೇಶವಿದ್ದರೂ ಕೇವಲ 6 ಸೀಟು ಮಾತ್ರ ನೀಡಿ ಉಳಿದ ಸೀಟು ನೀಡಲು ಪ್ರಶ್ನೆ ಮಾಡಿದರೇ ಬಿಇಒ ಅವರನ್ನು ಕೇಳಲು ಸೂಚಿಸುತ್ತಿದ್ದಾರೆ. ಅಧಿಕಾರಿಗಳ ಬಳಿ ಹೋದರೆ ಮಕ್ಕಳ ಪೋಷಕರನ್ನು ಬಿಕ್ಷುಕರಂತೆ ನೋಡುತ್ತಾರೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇದೆ ರೀತಿ ರೋಟರಿ ಶಾಲೆ ಹಾಗೂ ಅನೇಕ ಶಾಲೆಯಲ್ಲೂ ಆರ್‌ಟಿಇ ಅಡಿಯಲ್ಲಿ ಸೀಟು ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಜೆಎಸ್‌ಎಸ್ ಶಾಲೆಯಲ್ಲಿ ಎಲ್.ಕೆ.ಜಿ. ಮಕ್ಕಳ ಒಂದು ಸೀಟಿಗೆ ಒಂದುವರೆ ಲಕ್ಷ ರೂಗಳನ್ನು ಪಡೆಯುತ್ತಿದ್ದಾರೆ. ಆರ್‌ಟಿಇ ಅಡಿಯಲ್ಲಿ ನೀಡಲಾಗುತ್ತಿರುವ ಉಚಿತ ಶಿಕ್ಷಣದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ಕೈಗೊಳ್ಳಬೇಕು. ಸರ್ಕಾರ ಜವಬ್ಧಾರಿಯುತವಾಗಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸದಿದ್ದರೇ ಸರ್ಕಾರದ ವಿರುದ್ಧ ಉಗ್ರ ಪ್ರತಿಟನೆ ಕೈಗೊಂಡು ಹೋರಾಟ ಮಾಡುವುದಾಗಿ ಇದೆ ವೇಳೆ ಎಚ್ಚರಿಕೆ ನೀಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್, ಆರ್.ಆರ್. ನಾಗರಾಜ್ ಅಭಿಮಾನಿ ಸಂಘದ ಅಧ್ಯಕ್ಷ ವೆಂಕಟೇಶ್, ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಇದ್ದರು.