ಜುಲೈನಲ್ಲಿ ‘ಕೋಟಿ ವೃಕ್ಷ ಆಂದೋಲನ’ಕ್ಕೆ ಚಾಲನೆ: ಸಚಿವ ರಮಾನಾಥ ರೈ
ಮಂಗಳೂರು, ಜೂ.3: ರಾಜ್ಯದಲ್ಲಿ ಈ ಬಾರಿ ವಿವಿಧ ಇಲಾಖೆ ,ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಜುಲೈ 2ರಿಂದ 10ರೊಳಗೆ ಒಂದು ಕೋಟಿ ಸಸಿಗಳನ್ನು ನೆಡುವ ಮೂಲಕ ‘ಕೋಟಿ ವೃಕ್ಷ ಆಂದೋಲನ’ ಹಮ್ಮಿಕೊಳ್ಳ ಲಾಗುವುದು ಎಂದು ರಾಜ್ಯ ಅರಣ್ಯ ,ಪರಿಸರ ,ಜೀವಿ ಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಅವರು ಇಂದು ಪಿಲಿಕುಳದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಿಲಿಕುಳದ ಡಾ.ಶಿವರಾಮಕಾರಂತ ನಿಸರ್ಗಧಾಮದ ವತಿಯಿಂದ 17.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಿಲಿಕುಳ ಅರ್ಬನ್ ಇಕೋ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಪ್ರಪಂಚದಾದ್ಯಂತ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಜಾಗತಿಕ ಮಟ್ಟದಲ್ಲಿ ಪ್ರಮುಖ ವಿಷಯವಾಗಿ ಪರಿಗಣಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಜನಾಂಗಕ್ಕೆ ಪರಿಸರ ಸಂರಕ್ಷಣೆಯ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಲು ಇಕೋ ಪಾರ್ಕ್ ಸಹಕಾರಿ. ಈ ಪಾರ್ಕ್ ಮೂಲಕ ಕೈಗಾರಿಕೆಗಳಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ವಿವಿಧ ಮಾದರಿಗಳು, ಮಳೆ ನೀರು ಕೊಯ್ಲು, ತ್ಯಾಜ್ಯ ಸಂಸ್ಕರಣೆಯ ಬಗ್ಗೆ ಮಾಹಿತಿ ನೀಡುವ ಮಾದರಿಗಳನ್ನು ನಿರ್ಮಿಸಲಾಗುವುದು. ಪರಿಸರ ಸಂರಕ್ಷಣೆಯನ್ನು ಮಾಡಿ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವುದು ನಮ್ಮ ಭವಿಷ್ಯದ ಪೀಳಿಗೆಗೆ ನಾವು ನೀಡಬಹುದಾದ ಮಹತ್ವದ ಕೊಡುಗೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಿಲಿಕುಳದಲ್ಲಿ ಅರ್ಬನ್ ಇಕೋ ಪಾರ್ಕ್ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 5 ಕೋಟಿ ರೂ. ಮಂಜೂರಾಗಿದೆ. ಎರಡು ಕೋಟಿ ರೂ. ಬಿಡುಗಡೆಯಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ನಮ್ಮ ಪರಿಸರದಲ್ಲಿ ಮುಖ್ಯವಾಗಿ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ಕೈಗಾರಿಕೆ ನಡೆಸುವ ಕಂಪೆನಿಗಳು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ (ಸಿಎಸ್‌ಆರ್ ಫಂಡ್)ನಿಗದಿಪಡಿಸಲಾದ ನಿಧಿಯನ್ನು ಅರಣ್ಯ ,ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಇಲಾಖೆಗೆ ಶಕ್ತಿ ನೀಡಬೇಕು ಎಂದು ರಮಾನಾಥ ರೈ ತಿಳಿಸಿದರು.
ಗಿಡಮೂಲಿಕೆಗಳ ರಕ್ಷಣೆ
ರಾಜ್ಯದಲ್ಲಿ ದೇವರ ಕಾಡು, ಔಷಧಿ ಪಾರ್ಕ್ ಮೂಲಕ ಗಿಡ ಮೂಲಿಕೆಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ದೇಯಿ ಬೈದೆದಿ ಹೆಸರಿನಲ್ಲಿ ಔಷಧಿ ಪಾರ್ಕ್ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ಸಿರಿಚಂದನ ಕಾರ್ಯಕ್ರಮದ ಮೂಲಕ ಶ್ರೀಗಂಧದ ಕಾಡುಗಳ ರಕ್ಷಣೆ, ವಿಸ್ತರಣೆಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಪರಿಸರ ಜಾಗೃತಿಯಲ್ಲಿ ರಾಜ್ಯಕ್ಕೆ ದೇಶದಲ್ಲಿ ಎರಡನೆ ಸ್ಥಾನ
ಪರಿಸರ ಜಾಗೃತಿ ಮತ್ತು ಸಂರಕ್ಷಣೆಯ ವಿಷಯದಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೆ ಸ್ಥಾನಕ್ಕೇರಿದೆ. ಈ ಹಿಂದೆ 5ನೆ ಸ್ಥಾನದಲ್ಲಿತ್ತು. ಕರ್ನಾಟಕ ಸರಕಾರದ ಸಮಗ್ರ ಆಡಳಿತ ವ್ಯವಸ್ಥೆಯ ಅನುಷ್ಠಾನದಲ್ಲಿ ದೇಶದಲ್ಲಿ 3ನೆ ಸ್ಥಾನದಲ್ಲಿದೆ. ಸಾಮಾಜಿಕ ಕಾರ್ಯಕ್ರಮಗಳ ಅನುಷ್ಠಾನದ ವಿಚಾರ ತೆಗೆದುಕೊಂಡರೆ ರಾಜ್ಯಕ್ಕೆ ಎರಡನೆ ಸ್ಥಾನವಿದೆ ಎಂದು ರಮಾನಾಥ ರೈ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಜಶೇಖರ ಪುರಾಣಿಕ್ ಮಾತನಾಡುತ್ತಾ, ಪಿಲಿಕುಳದಲ್ಲಿ 2013ರಲ್ಲಿ 10 ಎಕ್ರೆ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಸಕ್ತ 17.60 ಕೋಟಿ ರೂ. ವೆಚ್ಚದ ಇಕೋಪಾರ್ಕ್‌ಗೆ ಡಿಪಿಆರ್ ಸಲ್ಲಿಸಲಾಗಿದೆ. ಈ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಇಕೋಪಾರ್ಕ್‌ನಲ್ಲಿ ನಗರದ ಮಾಲಿನ್ಯ ಪರಿಸರಕ್ಕಿಂತ ವಿಭಿನ್ನವಾಗಿ ಶುದ್ಧಗಾಳಿ, ಹಲ್ಲು ಹಾಸು, ಮರಗಿಡಗಳ ಹಸಿರು ವಾತಾವರಣ, ಕೆರೆ, ಹಾಗೂ ವಿವಿಧ ಕೈಗಾರಿಕೆಗಳ ಮಾದರಿಗಳ ನಿರ್ಮಾಣ, ಗಾಳಿಯಂತ್ರ, ಸೌರಶಕ್ತಿ ಹಾಗೂ ಇತರ ಶಕ್ತಿಯ ಮೂಲಗಳ ಮಾದರಿಗಳನ್ನು ನಿರ್ಮಿಸುವ ಮೂಲಕ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ. ಮೊಯ್ದೀನ್ ಬಾವ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಆರ್.ಎಂ.ಎನ್.ಸಹಾಯ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಎಸ್ ಬಿಜೂರು, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಶರ್ಮ, ಇಕೋಪಾರ್ಕ್ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಸುಬ್ಬಯ್ಯ ಶೆಟ್ಟಿ, ಮುಹಮ್ಮದ್ ಬ್ಯಾರಿ, ಡಾ.ಶ್ರೀನಿಕೇತನ್, ಪ್ರೊ.ಕಾವೇರಿಯಪ್ಪ, ಜಯಪ್ರಕಾಶ್ ಭಂಡಾರಿ, ಕೆ.ವಿ.ರಾವ್ ಮೊದಲಾದವರು ಉಪಸ್ಥಿತರಿದ್ದರು.