ಲಕ್ಷ ರೂ. ತುಂಬಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಹನೀಫ್
ವಿಟ್ಲ, ಜೂ.3: ಮಂಗಳೂರಿನ ಆಸ್ಪತ್ರೆಗೆ ತೆರಳಿದ ದಂಪತಿಗಳು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದ ನಗ-ನಗದು ಹಾಗೂ ಅಗತ್ಯ ದಾಖಲೆ ಪತ್ರಗಳನ್ನೊಳಗೊಂಡ ಬ್ಯಾಗನ್ನು ಅದರ ವಾರೀಸುದಾರರಿಗೆ ಹಿಂದುರುಗಿಸಿ ಕಲ್ಲಡ್ಕದ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಕಬಡ್ಡಿ ಆಟಗಾರ, ಕೆ.ಸಿ.ರೋಡ್ ನಿವಾಸಿ ಹನೀಫ್ ಎಂಬವರೇ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ. ಇವರ ಪ್ರಾಮಾಣಿಕತೆಯಿಂದಾಗಿ ಬಂಟ್ವಾಳ ತಾಲೂಕಿನ ಇರಾ-ಪರಪ್ಪುನಿವಾಸಿಗಳಾದ ಲೋಕನಾಥ ದಂಪತಿ ತಮ್ಮ ಬ್ಯಾಗ್ ಮರಳಿ ಪಡೆದಿದ್ದಾರೆ.
ರಿಕ್ಷಾ ಚಾಲಕ ಹನೀಫ್, ಗ್ರಾಮಾಂತರ ಪರ್ಮಿಟ್ ಹೊಂದಿರುವ ರಿಕ್ಷಾ ಚಾಲಕರಾಗಿದ್ದರೂ ವೃದ್ದರೋರ್ವರಿಗೆ ತುರ್ತು ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರನ್ನು ಬಿಟ್ಟು ಹಿಂತಿರುಗುತ್ತಿದ್ದ ದಾರಿಯಲ್ಲಿ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆಯೋರ್ವರನ್ನು ಕಂಡು ರಿಕ್ಷಾ ನಿಲ್ಲಿಸಿದ ಹನೀಫ್ ಗಾಯಗೊಂಡವರನ್ನು ಮಂಗಳೂರು ನರ್ಸಿಂಗ್ ಹೋಂಗೆ ಬಿಟ್ಟು ಬಂದಿದ್ದರು.
ರಾತ್ರಿ ಮನೆಯಲ್ಲಿ ರಿಕ್ಷಾದ ಹಿಂಬದಿ ಸೀಟಿನಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿ 1 ಲಕ್ಷ ರೂಪಾಯಿ ನಗದು, ನಗ ಹಾಗೂ ಅಗತ್ಯ ದಾಖಲೆ ಪತ್ರಗಳಿತ್ತು. ಬ್ಯಾಗ್‌ನಲ್ಲಿ ದೊರೆತ ಮಾಹಿತಿಯಂತೆ ವಾರೀಸುದಾರರನ್ನು ಸಂಪರ್ಕಿಸಿ ಅವರನ್ನು ಕಲ್ಲಡ್ಕಕ್ಕೆ ಕರೆಸಿ ಅವರ ಸೊತ್ತುಗಳನ್ನು ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಜಾತಿ-ಮತ-ಧರ್ಮದ ಹೆಸರಿನಲ್ಲಿ ಜನತೆ ಕಚ್ಚಾಟ ನಡೆಸುತ್ತಿರುವ ಈ ಸಂದರ್ಭದಲ್ಲೂ ಅದರಲ್ಲೂ ತಾಲೂಕಿನಲ್ಲಿ ಅತಿ ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟ ಕಲ್ಲಡ್ಕದಲ್ಲಿ ಹನೀಪ್ ಈ ರೀತಿಯ ಪ್ರಾಮಾಣಿಕತೆ ಮೆರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.