ಇಟಲಿ ಪೊಲೀಸರಿಂದ ಭಾರತೀಯ ವಿದ್ಯಾರ್ಥಿಗಳಿಗೆ 10 ತಾಸು ದಿಗ್ಬಂಧನ
ಮುಂಬೈ, ಜೂ.3: ವಾರಾಂತ್ಯದ ಪ್ರವಾಸಕ್ಕೆಂದು ಇಟಲಿಗೆ ಹೋಗಿದ್ದ ಮೂವರು ಭಾರತೀಯ ಐಐಟಿ ವಿದ್ಯಾರ್ಥಿಗಳನ್ನು ಅಲ್ಲಿನ ಪೊಲೀಸರು ವಿನಾ ಕಾರಣ ದಿಗ್ಬಂಧನದಲ್ಲಿರಿಸಿದ ಅಮಾನವೀಯ ವಿದ್ಯಮಾನವೊಂದು ಬೆಳಕಿಗೆ ಬಂದಿದೆ.
ಇಡೀ ದಿನ ಹಿಂಸೆ ಅನುಭಸಿದ ಬಳಿಕ ತಾವೀಗ ಮಾನಸಿಕವಾಗಿ ಆಘಾತಗೊಂಡಿದ್ದೇವೆ. ವಶಪಡಿಸಿಕೊಳ್ಳಲಾಗಿದ್ದ ಇತರರು ಪಾಕಿಸ್ತಾನ ಹಾಗೂ ಆಫ್ರಿಕದವರಾಗಿದ್ದರು. ಆದುದರಿಂದ ಇದೊಂದು ಜನಾಂಗೀಯ ತಾರತಮ್ಯವೆಂಬುದು ತಮಗೆ ಸ್ಪಷ್ಟವಾಗಿ ತೋರುತ್ತಿದೆಯೆಂದು ಐಐಟಿ-ದಿಲ್ಲಿಯ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಕ್ಷಿತ್ ಗೋಯಲ್ ಎಂಬವರು ಅಭಿಪ್ರಾಯಿಸಿದ್ದಾರೆ.
ಗೋಯಲ್ ತನ್ನ ಮಿತ್ರರಾದ ಐಐಟಿ-ದಿಲ್ಲಿಯ ದೀಪಕ್ ಭಟ್ ಹಾಗೂ ಐಐಟಿ-ಬಾಂಬೆಯ ಉದಯ್ ಕುಸುಪತಿ ಎಂಬವರ ಜೊತೆ ಫ್ರಾನ್ಸ್‌ನ ಐರೋಪ್ಯ ಸಂಶೋಧನ ಸಂಸ್ಥೆಯಾಗಿರುವ ಸೋಫಿಯಾ ಆಂಟಿಪೊಲೀಸ್‌ನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್‌ಗಾಗಿ ಫ್ರಾನ್ಸ್‌ಗೆ ಹೋಗಿದ್ದಾರೆ.
ಮೂರು ದಿನಗಳ ಹಿಂದೆ, ವಾರಾಂತ್ಯವನ್ನು ಇಟಲಿಯಲ್ಲಿ ಕಳೆಯಲು ನಿರ್ಧರಿಸಿದ ಸ್ನೇಹಿತರು ವೆನಿಸ್‌ನಿಂದ ಅಂಟಿಬ್ಸ್‌ಗೆ ಪ್ರಯಾಣಿಸುವ ವೇಳೆ ಪೊಲೀಸರು ಅವರನ್ನು ವಿನಾಕಾರಣ 10 ತಾಸುಗಳ ಕಾಲ ಕಾನೂನು ಬಾಹಿರವಾಗಿ ವಶದಲ್ಲಿರಿಸಿಕೊಂಡದ್ದರು.
ಹುಡುಗರನ್ನು ಇಟಲಿಯ ವೆಂಟಿಮಿಗ್ಲಿಯಾ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ತಳ್ಳಿ ಹೋದ ಬಳಿಕ, ಮೇ 30ರಂದು ಈ ಘಟನೆ ಬೆಳಕಿಗೆ ಬಂದಿದೆ.
ಸುಮಾರು 20-25 ಮಂದಿ ಪೊಲೀಸರು ಪಾಸ್‌ಪೋರ್ಟ್‌ಗಳ ತಪಾಸಣೆ ನಡೆಸುತ್ತಿದ್ದರು. ತಾವು ಕೂಡ ಪಾಸ್‌ಪೋರ್ಟ್‌ಗಳನ್ನು ತೋರಿಸಿದೆವು ಹಾಗೂ ತಮ್ಮನ್ನು ಕಳುಹಿಸಿದರು. ಆದರೆ, ತಕ್ಷಣ ಇನ್ನೊಬ್ಬ ಪೊಲೀಸ್ ಅಧಿಕಾರಿ ತಮ್ಮ ಪಾಸ್‌ಪೋರ್ಟ್ ಕೇಳಿದನು ಹಾಗೂ 10 ಜನರ ಗುಂಪೊಂದರೊಡನೆ ನಿಲ್ಲುವಂತೆ ಸೂಚಿಸಿದನೆಂದು ಗೋಯಲ್ ತಿಳಿಸಿದ್ದಾರೆ.
ತಮ್ಮಲ್ಲಿ ಅಗತ್ಯವಿರುವ ಎಲ್ಲ ದಾಖಲೆಗಳಿವೆಯೆಂದು ಮತ್ತೆ ಮತ್ತೆ ಹೇಳಿದರೂ ಕೇಳದ ಅಧಿಕಾರಿಗಳು ತಮ್ಮನ್ನು ಇನ್ನೊಂದು ಕೊಠಡಿಗೆ ಕರೆದೊಯ್ದರು. ಅಲ್ಲಿ ತಮ್ಮ ಎಲ್ಲ ವಸ್ತುಗಳನ್ನು ನೀಡುವಂತೆ ಸೂಚಿಸಿದರು. ತಮಗೆ ಮೊಬೈಲ್ ಫೋನ್ ಬಳಸಲೂ ಅವಕಾಶ ನೀಡಲಿಲ್ಲ. ತಮ್ಮ ವೈದ್ಯಕೀಯ ತಪಾಸಣೆ ನಡೆಸಿದರು. ಬೆರಳಚ್ಚು ಹಾಗೂ ಭಾವಚಿತ್ರಗಳನ್ನು ತೆಗೆದುಕೊಂಡರು. ಇಂಗ್ಲಿಷ್ ತಿಳಿದ ಅಧಿಕಾರಿಗಳು ತಮ್ಮ ವಿಚಾರಣೆ ನಡೆಸಲೆಂದು ಮತ್ತೆ ಮತ್ತೆ ಕೇಳಿಕೊಂಡರೂ ಅವರು ‘ತೊಂದರೆಯಿಲ್ಲ’ ಎನ್ನುತ್ತಲೇ ಇದ್ದರು. ಆಗ ಪರಿಸ್ಥಿತಿ ಬಿಗಡಾಯಿಸಿತ್ತೆಂದು ಅವರು ವಿವರಿಸಿದ್ದಾರೆ.
ಅಧಿಕಾರಿಗಳು ಸಂಪರ್ಕಕ್ಕೆ ಬಾರದಾದರು. ಏಕಾಏಕಿ ಆ ಮೂವರನ್ನು ಬಸ್ಸೊಂದರಲ್ಲಿ ಹತ್ತಿಸಿ, ಮೂರು ತಾಸು ಪ್ರಯಾಣದ ಜಿನೋವಾ ನಗರಕ್ಕೆ ಒಯ್ಯಲಾಯಿತು. ಆಶ್ಚರ್ಯವೆಂಬಂತೆ ಅವರನ್ನು ವಿಮಾನ ನಿಲ್ದಾಣಕ್ಕೆ ಒಯ್ದರು. ಶರೀರದ ಕೂಲಂಕಷ ತಪಾಸಣೆಯ ಬಳಿಕ ವಿಮಾನವೊಂದರಲ್ಲಿ ಬಾರಿ ಎಂಬಲ್ಲಿಗೆ ಕಳುಹಿಸಿಕೊಟ್ಟರು. ಅದು ಅವರಿಗೆ ಆ ಮೇಲೆಯೇ ತಿಳಿದುದು ಬಾರಿಯಲ್ಲಿ ಇತರ ಪ್ರಯಾಣಿಕರ ದಾಖಲೆ ತಪಾಸಣೆ ನಡೆಸುತ್ತಿದ್ದಾಗ, ಈ ಸ್ನೇಹಿತರಿಗೆ ಭಾರತದ ತಮ್ಮ ಕುಟುಂಬಿಕರನ್ನು ಸಂಪರ್ಕಿಸುವ ಅವಕಾಶ ದೊರೆಯಿತು.
ಪೊಲೀಸರು ತಮ್ಮನ್ನು ರಾತ್ರಿ ಶಿಬಿರವೊಂದರಲ್ಲಿ ಇರಿಸುವ ಯೋಜನೆಯಲ್ಲಿದ್ದಾರೆಂಬುದು ತಮಗೆ ಗೊತ್ತಾಯಿತು. ತಾವು ಕೂಡಲೇ ಅಖಿಲ್‌ನ ಸೋದರಿಯನ್ನು ಸಂಪರ್ಕಿಸಿ ಈ ಘಟನೆಯ ಕುರಿತು ಇಟಲಿಯಲ್ಲಿನ ಭಾರತೀಯ ದೂತಾವಾಸವನ್ನು ಸಂಪರ್ಕಿಸುವಂತೆ ಕೋರಿದೆವು. ತಾಸಿನೊಳಗೆ ಪೊಲೀಸ್ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಹಿಂದಿರುಗಿಸಿದರು. ‘ಪ್ರಮಾದ’ಕ್ಕಾಗಿ ಕ್ಷಮೆ ಕೇಳಿದರು ಹಾಗೂ ತಮಗೆ ಪ್ರಯಾಣ ಮುಂದುವರಿಸಲು ಅವಕಾಶ ನೀಡಿದರೆಂದು ಕುಸುಪತಿ ವಿವರಿಸಿದ್ದಾರೆ.
ಮೇ 30ರ ಮುಂಜಾನೆ 8:30ಕ್ಕೆ ವೆಂಟಿ ಮಿಗ್ಲಿಯಾದಲ್ಲಿ ರೈಲು ಹಿಡಿದು ಸ್ವಂತ ಹಣದಲ್ಲಿ ಮೇ 31ರ ಮುಂಜಾನೆ 7ಕ್ಕೆ ಅವರು ರೋಮ್‌ಗೆ ತಲುಪಿದರು ಬಳಿಕ ಅವರು ಇಟಲಿಯ ಭಾರತೀಯ ದೂತಾವಾಸಕ್ಕೆ ತಮಗೊದಗಿದ ಬವಣೆಯನ್ನು ವಿವರಿಸಿ ಪತ್ರ ಬರೆದರು.
ಇಟಲಿಯ ಪೊಲೀಸರ ವಿರುದ್ಧ ಯಾವುದೇ ದೂರು ಸಲ್ಲಿಸಲು ವಿದ್ಯಾರ್ಥಿಗಳು ನಿರ್ಧರಿಸಿಲ್ಲವಾದರೂ, ಆನ್‌ಲೈನ್ ಅಭಿಯಾನ ಆರಂಭಿಸಿ, ತಮ್ಮ ಪತ್ರಗಳ ಮೂಲಕ ಅಧಿಕಾರಿಗಳನ್ನು ತಲುಪುವ ಪ್ರಯತ್ನದಲ್ಲಿದ್ದಾರೆ.