×
Ad

ಮುಹಮ್ಮದ್ ಅಲಿ : ಶತಮಾನದ ಶ್ರೇಷ್ಠ ಬಾಕ್ಸಿಂಗ್ ಪ್ರತಿಭೆಯ ನಿರ್ಗಮನ

Update: 2016-06-04 12:03 IST

ವಿಶ್ವವಿಖ್ಯಾತ ಬಾಕ್ಸಿಂಗ್ ಪಟು, ಬಾಕ್ಸಿಂಗ್ ಕ್ಷೇತ್ರದ ದಂತಕಥೆಯೆಂದೇ ಬಣ್ಣಿಸಲ್ಪಟ್ಟಿದ್ದ ಶತಮಾನದ ಶ್ರೇಷ್ಠ ಬಾಕ್ಸರ್  ಮುಹಮ್ಮದ್ ಅಲಿ (74)ಇನ್ನಿಲ್ಲ. ಅವರ ಜೀವನವೇ ಒಂದು ಸಾಹಸಗಾಥೆಯಾಗಿದ್ದು ನಾಗರಿಕ ಹಕ್ಕುಗಳ ಬಗ್ಗೆ ಅವರಿಗಿದ್ದ ಕಾಳಜಿ ಅವರಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ತಮ್ಮ 21 ವರ್ಷಗಳ ಬಾಕ್ಸಿಂಗ್ ವೃತ್ತಿಯಲ್ಲಿ ಅವರು 56 ಪಂದ್ಯಗಳನ್ನು ಗೆದ್ದಿದ್ದರು ಹಾಗೂ ಕೇವಲ ಐದರಲ್ಲಿ ಮಾತ್ರ ಸೋತಿದ್ದರು. ಅವರು 7 ಪಂದ್ಯಗಳನ್ನು ನಾಕೌಟ್ ಹಂತದಲ್ಲಿ ಗೆಲುವು ಸಾಧಿಸಿದ್ದರು. 1964, 1974 ಹಾಗೂ 1978ರಲ್ಲಿ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆದ್ದಿದ್ದರು.
ಮಹಮ್ಮದ್ ಅಲಿ ಅವರ ಮೂಲ ಹೆಸರು ಕಾಸ್ಸಿಯಸ್ ಮಾರ್ಸೆಲ್ಲಸ್ ಕ್ಲೇ. ಅವರು ಹುಟ್ಟಿದ್ದು ಕೆಂಟಕ್ಕಿಯ ಲೂಯಿಸ್ ವಿಲ್ಲೆಯಲ್ಲಿ ಜನವರಿ 17, 1942 ರಂದು.
 
ಬಾಕ್ಸಿಂಗ್ ರಂಗಕ್ಕೆ ಎಂಟ್ರಿ: ಬಾಕ್ಸಿಂಗ್ ರಂಗಕ್ಕೆ ಅವರ ಎಂಟ್ರಿಗೆ ಕಾರಣವಾದ ಘಟನೆ ಅತ್ಯಂತ ಸ್ವಾರಸ್ಯಕರವಾಗಿದೆ. ಅವರಿಗೆ 12 ವರ್ಷವಾಗಿದ್ದಾಗ ಅವರ ಬೈಸಿಕಲ್  ಕಳ್ಳತನವಾದಾಗ, ಕಳ್ಳನನ್ನು ಹಿಡಿದು ಚಚ್ಚುವುದಾಗಿ  ಅವರು ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಹೇಳಿದ್ದರು.  ಯುವಕರಿಗೆ ಸ್ಥಳೀಯ ಜಿಮ್ ಒಂದರಲ್ಲಿ ತರಬೇತಿ ನೀಡುತ್ತಿದ್ದ  ಪೊಲೀಸ್ ಅಧಿಕಾರಿ ಜೋ ಮಾರ್ಟಿನ್ ಕ್ಲೇಗೆ ಅಲ್ಲಿ ಬಾಕ್ಸಿಂಗ್ ತರಬೇತಿ ಹೊಂದುವಂತೆ ಸಲಹೆ ನೀಡಿದ್ದೇ ಮುಂದೆ ಅವರು ಬಹುದೊಡ್ಡ ಬಾಕ್ಸರ್ ಆಗಲು ಕಾರಣವಾಯಿತು. 1954ರಲ್ಲಿ ಮೊದಲ ಬಾರಿಗೆ ಅಮೆಚೂರ್ ಬಾಕ್ಸಿಂಗ್ ಪಂದ್ಯವೊಂದರಲ್ಲಿ ಕ್ಲೇ ಭಾಗವಹಿಸಿದ್ದರಲ್ಲದೆ  ಅವರಲ್ಲಿ ಇತರ ಹುಡುಗರಿಗಿಂತ ಹೆಚ್ಚಿನ ಆತ್ಮವಿಶ್ವಾಸವಿದ್ದುದನ್ನು ಎಲ್ಲರೂ ಗಮನಿಸಿದ್ದರು.
 ಮುಂದಿನ ಐದು ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ ಅವರು 1959ರಲ್ಲಿ ಗೋಲ್ಡನ್ ಗ್ಲೋವ್ಸ್ ಟೂರ್ನಮೆಂಟಿನಲ್ಲಿ ಚಾಂಪಿಯನ್ ಆಗಿಯೂ ಮೆರೆದರು.
 
ಪ್ರಥಮ ಒಲಿಂಪಿಕ್ಸ್ ವಿಜಯ: 1960ರಲ್ಲ ರೋಮ್ ಒಲಿಂಪಿಕ್ಸ್ ಗೆ ಅಮೇರಿಕಾ ತಂಡದ ಭಾಗವಾಗಿದ್ದ ಅವರು ಲೈಟ್ ಹೆವಿವೈಟ್ ಚಾಂಪಿಯನ್ ಆದರು.  ಅಮೇರಿಕಾಕ್ಕೆ ಹಿಂದಿರುಗಿದಾಗ ಅವರಿಗೆ ಭಾರೀ ಸ್ವಾಗತ ದೊರೆತರೂ ಅಲ್ಲಿನ ವರ್ಣಬೇಧ ನೀತಿಯಿಂದಾಗಿ  ಅವರಿಗೆ ಒಮ್ಮೆ ರೆಸ್ಟಾರೆಂಟಿನಲ್ಲಿ ಟೇಬಲ್ ನಿರಾಕರಿಸಿದಾಗ ಬಹಳಷ್ಟು ಅವಮಾನಕಾರಿಯಾಗಿತ್ತು. ತಮ್ಮ ಒಲಿಂಪಿಕ್ ಪದಕವನ್ನು  ತಾನು ಎಸೆದಿದ್ದಾಗಿ  ತನ್ನ 1975ರ ಆತ್ಮಕಥನದಲ್ಲಿ  ಅವರು ಹೇಳಿದ್ದರೂ ಅವರು ರೋಮ್ ನಿಂದ ಹಿಂದಿರುಗಿದ ಮರು ವರ್ಷವೇ ಅದನ್ನು ಕಳೆದುಕೊಂಡಿದ್ದರೆಂದು ತಿಳಿದು ಬಂದಿತ್ತು.
 
ಹದಿನೆಂಟು ವರ್ಷದವನಿರುವಾಗಲೇ ವೃತ್ತಿಪರ ಬಾಕ್ಸಿಂಗ್ ರಂಗಕ್ಕೆ  ಧುಮುಕಿದ ಅವರು ಏಂಜಲೋ ದುಂಡೀ ಅವರಿಂದ ತರಬೇತಿ ಪಡೆದರು. ಸ್ವ ಪ್ರಚಾರದಿಂದ ಆರಂಭದಲ್ಲಿ ಅವರಿಗೆ ಖ್ಯಾತಿ ದೊರೆತರೂ ಜನಪ್ರಿಯತೆ ತರಲಿಲ್ಲ. ಬಾಕ್ಸಿಂಗ್ ರಿಂಗ್ ನಲ್ಲಿ ಅವರು ತಮ್ಮ ಎದುರಾಳಿಗಳ ಸುತ್ತ ಕುಣಿಯುತ್ತಿದ್ದುದು ಅವರನ್ನ ಅಣಕಿಸುತ್ತಿದ್ದುದು  ಕೂಡ ಅವರ ವಿಚಿತ್ರ ನಡವಳಿಕೆಯಾಗಿತ್ತು.
ತನ್ನ ಎದುರಾಳಿಗಳು ಯಾವಾಗ ಸೋಲುತ್ತಾರೆಂಬುದರ ಬಗ್ಗೆ ಅವರು ಭವಿಷ್ಯ ನುಡಿಯುತ್ತಿದ್ದರು ಹಾಗೂ ಅವರು ಹೇಳಿದ ಸುತ್ತಿನಲ್ಲೇ ಅವರು ಬೀಳುತ್ತಿದ್ದರು ಎಂದು ಕ್ಲೇ ಜಂಭ ಕೊಚ್ಚಿಕೊಳ್ಳುತ್ತಿದ್ದರು.
 
ನೇಷನ್ ಆಫ್ ಇಸ್ಲಾಮ್ :
ಬಾಕ್ಸಿಂಗ್ ರಿಂಗ್ ನಲ್ಲಿ ಅವರು ಏನೇ ಮಾಡುತ್ತಿದ್ದರೂ ಅದರ ಹೊರಗಡೆ ಅವರು ವರ್ಣಬೇಧ ನೀತಿಯ ಕಟು ಟೀಕಾಕಾರರಾಗಿದ್ದರು. ಕರಿಯ ಜನಾಂಗದ ಪರವಾಗಿದ್ದ ನೇಷನ್ ಆಫ್ ಇಸ್ಲಾಮ್  ಆಂದೋಲನದಿಂದ ಪ್ರೇರಿತರಾದ ಅವರು ಮುಂದೆ  ಮಹಮ್ಮದ್ ಅಲಿಯೆಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಕಾಸ್ಸಿಯಸ್ ಕ್ಲೇ ತನ್ನ `ಗುಲಾಮ ಹೆಸರು' ಎಂದು ಅವರು ಹೇಳುತ್ತಿದ್ದರು ಹಾಗೂ ಯಾರೂ ಆ ಹೆಸರು ಹಿಡಿದು ತನ್ನನ್ನು ಕರೆಯದಂತೆ ಹೇಳುತ್ತಿದ್ದರು.
 
ಜೈಲು ಶಿಕ್ಷೆ : 1967ರಲ್ಲಿ  ಬಾಕ್ಸಿಂಗ್ ಪಂದ್ಯವೊಂದರ ವೇಳೆ ಎರ್ನಿಟೆರೆಲ್  ಅಲಿಯ ಮೊದಲ ಹೆಸರು ಹೇಳಲಾರಂಭಿಸಿದಾಗ ಅವರು ಜೋರಾಗಿ `ನನ್ನ ಹೆಸರೇನು ಅಂಕಲ್ ಟಾಮ್ ?'' ಎಂದು ಜೋರಾಗಿ ಕೇಳಿದರು. ಅಮೇರಿಕಾದ ಜನರ ಆಕ್ರೋಶಕ್ಕೆ ಅವರು ಗುರಿಯಾದಾಗ ಅವರ ಪಂದ್ಯಗಳಿಗೆ ಕೆಲವೇ ಕೆಲ ಜನ ಬರಲಾರಂಭಿಸಿದ್ದರು.
ಮುಂದೆ ಅವರು ಅಮೇರಿಕ ಸೇನೆ ಸೇರಲು ನಿರಾಕರಿಸಿ ಸಹಿ ಹಾಕಲೊಲ್ಲೆನೆಂದಾಗ ಅವರ ಚಾಂಪಿಯನ್ ಬಿರುದನ್ನು ಕಸಿಯಲಾಯಿತಲ್ಲದೆ ಅವರಿಗೆ ಜೈಲು ಶಿಕ್ಷೆ ಕೂಡ  ವಿಧಿಸಲಾಗಿತ್ತಾದರೂ ಮುಂದೆ ಅದನ್ನು ರದ್ದುಪಡಿಸಲಾಯಿತು.
 ಮುಂದೆ 1970ರಲ್ಲಿ ಮತ್ತೆ ಬಾಕ್ಸಿಂಗ್ ರಂಗಕ್ಕೆ ಧುಮುಕಿದ ಅವರು ಜೆರ್ರಿ ಕ್ವಾರ್ರಿ ವಿರುದ್ಧ ಜಯ ದಾಖಲಿಸಿದರು.1971ರಲ್ಲಿ ಅವರು ಪ್ರಥಮ ಬಾರಿಗೆ ಜೋ ಫ್ರೇಝಿಯರ್ ಅವರ ಕೈಯಲ್ಲಿ ಸೋಲನ್ನಪ್ಪಿದರು. 1974ರಲ್ಲಿ ಜಾರ್ಕ್ ಫೋರ್ಮೆನ್ ಅವರ ವಿರುದ್ಧದ ಗೆಲುವು ಅವರ ಜೀವನದಲ್ಲಿಯೇ ಅತೈಂತ ದೊಡ್ಡ ಗೆಲುವಾಗಿತ್ತು. ಏಳು ಸುತ್ತಿನ ತನಕ  ಅವರು ದೈತ್ಯ ಜಾರ್ಜ್ ಎದುರು ತಲೆಬಾಗಿಸಿದ್ದರೆ, ಎಂಟನೇ ಸುತ್ತಿನಲ್ಲಿ ಮೇಲೆದ್ದು ಬಂದು ಅವರು ನೆಲಕಚ್ಚುವಂತೆ ಮಾಡಿದರು.
ತಮ್ಮ 32ನೇ ವರ್ಷದಲ್ಲಿ ವಿಶ್ವ ಹೆವಿ ವೈಟ್ ಚಾಂಪಿಯನ್ ಶಿಪ್ ಮತ್ತೆ ಪಡೆದು ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ಎರಡನೇ ವ್ಯಕ್ತಿಯಾದರು.
 
 ಮುಂದೆ ಅವರು ಫ್ರೇಝಿಯರ್ ಜತೆಗಿನ ಪಂದ್ಯಾಟದಲ್ಲಿ  ಸಾವನ್ನು ಅತ್ಯಂತ ಹತ್ತಿರದಿಂದ ನೋಡಿದೆನೆಂದು ಹೇಳುತ್ತಿದ್ದರೂ 14ನೇ ಸುತ್ತಿನ ಹೊತ್ತಿಗೆ ವಿಜಯ ದಾಖಲಿಸುವಲ್ಲಿ ಸಫಲರಾದರು.
 
ಸೋಲು: ಫೆಬ್ರವರಿ 1978ರಲ್ಲಿ ಅವರು ತಮಗಿಂತ 12 ವರ್ಷ ಕಿರಿಯನಾಗಿದ್ದ ಹಾಗೂ 1976 ಒಲಿಂಪಿಕ್ ಲೈಟ್ ವೈಟ್ ಚಾಂಪಿಯನ್  ಆಗಿದ್ದ ಲಿಯೋನ್ ಸ್ಪಿಂಕ್ಸ್ ವಿರುದ್ಧ ಸೋಲನ್ನನುಭವಿಸಿದರು. ಎಂಟು ತಿಂಗಳ ನಂತರ ಅವರು ಮೂರನೇ ಬಾರಿ ವಿಶ್ವ ಚಾಂಪಿಯನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.
 
ಆರೋಗ್ಯ ಸಮಸ್ಯೆ: ತಮ್ಮ 40ನೇ ವಯಸ್ಸಿನಲ್ಲಿ ಬಾಕ್ಸಿಂಗ್ ರಂಗದಿಂದ ನಿರ್ಗಮಿಸಿದ ಅಲಿಗೆ ಪಾರ್ಕಿನ್ಸನ್ಸ್ ಕಾಯಿಲೆಯಿದೆಯೆಂದು ಪತ್ತೆಯಾಗಿತ್ತು. ಆದರೂ ಅವರು 1996ರ ಒಲಿಂಪಿಕ್ಸ್ ಜ್ಯೋತಿಯನ್ನು ಅಟ್ಲಾಂಟದಲ್ಲಿ ಹೊತ್ತಿಸಿದ್ದರು. 2005ರಲ್ಲಿ ಅವರು ಅಮೇರಿಕಾದ ಅತ್ಯುನ್ನತ ಪ್ರಶಸ್ತಿಗಳಾದ ಪ್ರೆಸಿಡೆನ್ಶಿಯಲ್ ಸಿಟಿಜನ್ಸ್ ಮೆಡಲ್ ಮತ್ತು ಪ್ರೆಸಿಡೆನ್ಶಿಯಲ್ ಮೆಡಲ್ ಫಾರ್ ಫ್ರೀಡಮ್ ಪಡೆದಿದ್ದರು. ಅದೇ ವರ್ಷ ಕೆಂಟಕಿಯಲ್ಲಿ ಮುಹಮ್ಮದ್ ಅಲಿ ಸೆಂಟರ್ ಸ್ಥಾಪನೆಯಾಯಿತು.

ಅವರೊಬ್ಬ ಅಪೂರ್ವ ಶೋಮ್ಯಾನ್ ಆಗಿದ್ದರು ಹಾಗೂ  ಸಾವಿರಾರು ಜನರಿಗೆ ತಮ್ಮ ಆತ್ಮವಿಶ್ವಾಸ, ದೃಢ ನಿಲುವಿನಿಂದ ಸ್ಫೂರ್ತಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News