×
Ad

ಕಾಪು ಪುರಸಭೆ: ಅಧ್ಯಕ್ಷರಾಗಿ ಸೌಮ್ಯ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್ ಆಯ್ಕೆ

Update: 2016-06-04 17:33 IST

ಕಾಪು : ನೂತನ ಕಾಪು ಪುರಸಭೆಯ ಚೊಚ್ಚಲ ಅಧ್ಯಕ್ಷರಾಗಿ ಮೊದಲ 20ತಿಂಗಳ ಅವಧಿಗೆ ಕಾಂಗ್ರೆಸ್ ಪಕ್ಷದ ಸೌಮ್ಯ ಹಾಗೂ ಉಪಾಧ್ಯಕ್ಷರಾಗಿ ಕೆ.ಎಚ್.ಉಸ್ಮಾನ್ ಆಯ್ಕೆಯಾದರು.

ಕಾಪು ಪುರಸಭಾ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯಲ್ಲಿ ಕೋತಲ್‌ಕಟ್ಟೆ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಸೌಮ್ಯ ಸಂಜೀವ ಅವರು ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೊಂಬಗುಡ್ಡೆ ವಾರ್ಡ್‌ನಿಂದ ಚುನಾಯಿತರಾಗಿದ್ದ ಅರುಣ್ ಶೆಟ್ಟಿ ಪಾದೂರು ಅವರನ್ನು ಕಾಂಗ್ರೆಸ್‌ನ ಕೊಪ್ಪಲಂಗಡಿ ವಾರ್ಡ್‌ನಿಂದ ಆಯ್ಕೆಯಾದ ಕೆ.ಎಚ್.ಉಸ್ಮಾನ್ ಅವರು 11-13ಮತಗಳಿಂದ ಸೋಲಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೆ.ಎಚ್.ಉಸ್ಮಾನ್ ಹಾಗೂ ಶಾಬು ಸಾಹೇಬ್ ಬಿಜೆಪಿಯಿಂದ ಅರುಣ್ ಶೆಟ್ದ ಪಾದೂರು ನಾಮಪತ್ರ ಸಲ್ಲಿಸಿದ್ದದರು. ಈ ವೇಳೇ ಶಾಬು ಸಾಹೇಬ್ ನಾಮಪತ್ರ ಹಿಂದೆಗೆದುಕೊಂಡರು. ಕೈ ಎತ್ತುವ ಮೂಲಕ ಆಯ್ಕೆಪ್ರಕ್ರಿಯೆ ನಡೆಯಿತು. ಉಸ್ಮಾನ್ ಪರ ಸಚಿವ ವಿನಯಕುಮಾರ್ ಸೊರಕೆ ಸೇರಿ 13ಮತಗಳನ್ನು ಪಡೆದರೆ ಅರುಣ್ ಶೆಟ್ಟಿ ಅವರಿಗೆ 11ಮತಗಳನ್ನು ಲಭಿಸಿತು.

ಉಡುಪಿ ತಹಶೀಲ್ದಾರ್ ಟಿ.ಜಿ.ಗುರುಪ್ರಸಾದ್ ಚುನಾವಣಾ ಪ್ರಕ್ರಿಯೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಿಸಿದರು.

ಪದವೀಧರೆಯಾಗಿರು ಸೌಮ್ಯ: 28 ವರ್ಷದ ಸೌಮ್ಯ ಸಂಜೀವ ಮೊದಲ ಬಾರಿಗೆ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಲ್ಲಿನ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಸಂಜೀವ ಹಾಗೂ ಬೇಬಿ ದಂಪತಿಯ ಪುತ್ರಿಯಾಗಿದ್ದಾರೆ. ಬಿಎ, ಬಿಎಡ್ ಪದವೀಧರೆಯಾಗಿದ್ದು, ಪ್ರಸ್ತುತ ಕಾಪುವಿನ ಉಳಿಯರಗೋಳಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಕೆ ಕೋತಲ್‌ಕಟ್ಟೆ ವಾರ್ಡ್‌ನಿಂದ ಆಯ್ಕೆಯಾಗಿದ್ದರು.

52ವರ್ಷದ ಕೆ.ಎಚ್.ಉಸ್ಮಾನ್ ಅವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪಿಯುಸಿ ಶಿಕ್ಷಣದ ಬಳಿಕ ಇಲೆಕ್ಟ್ರಿಕಲ್ ಡಿಪ್ಲೋಮಾ ಮುಗಿಸಿದ ಇವರು ಇಲೆಕ್ಟ್ರಿಕಲ್ ಸಂಸ್ಥೆಯೊಂದನ್ನು ಕಾಪುವವಿನಲ್ಲಿ ನಡೆಸುತಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತಿದ್ದರು. ಕೊಪ್ಪಲಂಗಡಿ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ.

ಮೀಸಲಾತಿ: ಚುನಾವಣೆಯ ಮೊದಲೇ ಕಾಪು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಈ ಪ್ರಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಪರಿಶಿಷ್ಠ ಜಾತಿ ಮಹಿಳೆ ಕಾಂಗ್ರೆಸ್‌ನಲ್ಲಿ ಇಬ್ಬರು ಇದ್ದು, ಬಿಜೆಪಿಯಲ್ಲಿ ಯಾವುದೇ ಅಭ್ಯರ್ಥಿಗಳು ಇರಲಿಲ್ಲ. ಇದರಿಂದಾಗಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗವಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಪೈಪೋಟಿ ಇತ್ತು. ಈ ಲಾಭ ಪಡೆಯಲು ಬಿಜೆಪಿಯು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು.

ಮೂಲಸೌಕರ್ಯಕ್ಕೆ ಆದ್ಯತೆ: ಕಾಪು ಪರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ, ತ್ಯಾಜ್ಯ ವಿಲೇವರಿ ಬಗ್ಗೆ ಮೊದಲ ಆದ್ಯತೆ ನೀಡಲಾಗುವುದು. ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಹಿರಿಯರ ಮಾರ್ಗದರ್ಶನದಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಅಧ್ಯಕ್ಷರಾಗಿ ಆಯ್ಕೆಯಾದ ಸೌಮ್ಯ ಸಂಜೀವ ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಮಾದರಿ ಪುರಸಭೆ: ಕಾಪುವನ್ನು ಎಲ್ಲಾ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಮಾದರಿ ಪುರಸಭೆಯಾಗಿ ರಾಜ್ಯ, ರಾಷ್ಟ್ರದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ. ಗಂಭೀರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವುದಲ್ಲದೆ. ಸಮಸ್ಯೆ ಹೇಳಿಕೊಂಡು ಬರುವವರ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎಚ್.ಉಸ್ಮಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News