×
Ad

ಬೈಕಿಗೆ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಲೆಯತ್ನ ಪ್ರಕರಣ : ಚಿತ್ರ ನಟ ವಿನೋದ್ ಆಳ್ವರ ಜೀಪು ಚಾಲಕನಿಗೆ ನಿರೀಕ್ಷಣಾ ಜಾಮೀನು

Update: 2016-06-04 17:59 IST

ಪುತ್ತೂರು: ಬಹುಭಾಷಾ ಚಲನಚಿತ್ರ ನಟ, ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಮೂಡಾಯೂರು ನಿವಾಸಿಯಾದ ವಿನೋದ್ ಆಳ್ವ ಅವರು ಕೆಲಸದಿಂದ ಕೈಬಿಟ್ಟಿದ್ದ ಮಾಜಿ ಕೆಲಸದಾಳು ಸಚ್ಚಿದಾನಂದ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ವಿನೋದ್ ಆಳ್ವ ಅವರ ಜೀಪು ಚಾಲಕ ಉದಯ ಚಕ್ಕಿತ್ತಾಯರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

   ಕಳೆದ ನವಂಬರ್ 15ರಂದು ಪುತ್ತೂರು ತಾಲೂಕಿನ ಈಶ್ವರಮಂಗಲ ಬಳಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿ ಪಡುವನ್ನೂರು ಗ್ರಾಮದ ಮಾಣಿಬೆಟ್ಟು ರಾಮ ಪಾಟಾಳಿಯ ಮಗ ಸಚ್ಚಿದಾನಂದ ಅವರು ಸಂಪ್ಯ ಪೊಲೀಸರಿಗೆ ನೀಡಿದ್ದರು. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಎಸ್ಪಿ ಶರಣಪ್ಪ ಅವರ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಂಪ್ಯ ಠಾಣೆಯ ಎಸ್‌ಐ ಬಿ ಎಸ್ ರವಿ, ನೇತೃತ್ವದ ಪೊಲೀಸ್ ತಂಡ ಮರುದಿನ ಕಾರ್ಯಾಚರಣೆ ನಡೆಸಿ ವಿನೋದ ಆಳ್ವರನ್ನು ಅವರ ಮನೆಯಿಂದ ಬಂಧಿಸಿದ್ದರು. ಬಳಿಕ ವಿನೋದ್ ಆಳ್ವ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದರು.

ಈ ಘಟನೆಯ ಬಳಿಕ ಉದಯ ಚಕ್ಕಿತ್ತಾಯ ಅವರು ತಲೆಮರೆಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸರು ಸಚ್ಚಿದಾನಂದ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಉದಯ ಚಕ್ಕಿತ್ತಾಯರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದ ಜೀಪನ್ನು ವಶಪಡಿಸಿಕೊಂಡಿದ್ದರು. ಬಳಿಕ ನ್ಯಾಯಾಲಯದ ಮೂಲಕ ಜೀಪನ್ನು ಬಿಡುಗಡೆಗೊಳಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಉದಯ ಚಕ್ಕಿತ್ತಾಯ ಅವರು ವಕೀಲರ ಮೂಲಕ ಪುತ್ತೂರಿನ 5ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

ಆರೋಪಿ ಪರವಾಗಿ ವಕೀಲರಾದ ಪ್ರಶಾಂತ್ ಪಿ.ರೈ ಪುಣ್ಚಪ್ಪಾಡಿ, ಹರಿಪ್ರಸಾದ್ ರೈ ಅಜ್ಜಿಕಲ್ಲು ಅವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News