×
Ad

ಬಂಟ್ವಾಳ ಪುರಸಭೆ ಎಂಜಿನಿಯರ್‌ನಿಂದ ಸುಳ್ಳು ಮಾಹಿತಿ: ಸಜಿಪನಡು ಗ್ರಾಪಂ ಅಧ್ಯಕ್ಷ ನಾಸೀರ್ ಆಕ್ಷೇಪ

Update: 2016-06-04 18:10 IST

ಬಂಟ್ವಾಳ, ಜೂ. 4: ಸಜಿಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸಜಿಪನಡು ಗ್ರಾಮ ಪಂಚಾಯತ್‌ನ ತೀವ್ರ ವಿರೋಧ ಇದೆ ಎಂದು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪುರಸಭೆಯ ಸಾಮಾನ್ಯ ಸಭೆ ಹಾಗೂ ಮಂಗಳೂರು ಸಹಾಯಕ ಕಮಿಷನರ್ ಡಾ.ಅಶೋಕ್‌ರವರಿಂದ ನಡೆದ ತುರ್ತು ಸಭೆಯಲ್ಲಿ ಪುರಸಭೆಯ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಕಂಚಿನಡ್ಕ ಪದವಿನಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಸಜಿಪನಡು ಗ್ರಾಮ ಪಂಚಾಯತ್‌ನ ವಿರೋಧವಿಲ್ಲ ಎಂದು ತಪ್ಪು ಮಾಹಿತಿ ನೀಡಿರುವುದು ಆಕ್ಷೇಪಾರ್ಹವಾಗಿದೆ ಎಂದಿರುವ ಅವರು, ಘನತ್ಯಾಜ್ಯ ಘಟಕ ನಿರ್ಮಾಣದ ಬಗ್ಗೆ ಆರಂಭಿಕ ಹಂತದಿಂದಲೇ ಗ್ರಾಪಂ ವಿರೋಧಿಸಿದ್ದು ಗ್ರಾಮ ಸಭೆ ಹಾಗೂ ಗ್ರಾಪಂನ ಸಾಮಾನ್ಯ ಸಭೆಗಳಲ್ಲಿ ಘಟಕದ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ತಮ್ಮ ವಿರೋಧವನ್ನು ಕ್ಷೇತ್ರದ ಶಾಸಕರೂ ಆದ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಅಂದಿನ ಜಿಲ್ಲಾಧಿಕಾರಿ ಚೆನ್ನಪ್ಪ ಗೌಡರವರ ಗಮನಕ್ಕೂ ತಂದಿದ್ದೇವೆ ಎಂದಿದ್ದಾರೆ.

ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿರುವ ಕಂಚಿನಡ್ಕ ಪದವಿನ ಪರಿಸರದಲ್ಲಿರುವ 141 ಮನೆಗಳು, ಶಾಲೆ, ಅಂಗನವಾಡಿ, ಮದರಸವನ್ನು ಸೂಕ್ತ ವ್ಯವಸ್ಥೆ ಇರುವ ಬೇರೆ ಸ್ಥಳಕ್ಕೆ ಸ್ಥಳಂತರಿಸುವುದು, ಸಾರ್ವಜನಿಕರಿಗೆ ಮತ್ತು ಪರಿಸರಕ್ಕೆ ತೊಂದರೆಯಾಗದಂತೆ ಪರಿಸರ ಸ್ನೇಹಿ ಘನತ್ಯಾಜ್ಯ ಘಟಕ ನಿರ್ಮಿಸುವುದು ಸಹಿತ ಗ್ರಾಪಂನ ಇತರ ಐದು ಬೇಡಿಕೆಯನ್ನು ಈಡೇರಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಬಂಟ್ವಾಳ ಪುರಸಭೆ ಈಡೇರಿಸುವರೆಗೆ ಘನತ್ಯಾಜ್ಯ ಘಟಕ ಕಾರ್ಯಾರಂಭಕ್ಕೆ ಸಜಿಪನಡು ಗ್ರಾಮ ಪಂಚಾಯತ್ ಅನುವು ಮಾಡಿಕೊಡುವುದಿಲ್ಲ. ಬೇಡಿಕೆಗಳನ್ನು ನಿರ್ಲಕ್ಷಿಸಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News