ಉಳ್ಳಾಲ: ಕೊಲ್ಯ ಶ್ರೀ ರಾಜಯೋಗಿ ಸದ್ಗುರು ರಮಾನಂದ ಸ್ವಾಮೀಜಿಯ ಪುಣ್ಯ ಆರಾಧನೆ
ಉಳ್ಳಾಲ: ಧ್ಯಾನವೇ ಸನ್ಯಾಸಿಗಳು ಗಳಿಸುವ ಗೌಪ್ಯಸಂಪತ್ತು ಎಂದು ಕೊಲ್ಯ ಸ್ವಾಮೀಜಿಗಳು ಸಾಧಿಸಿ ತೋರಿಸಿದ್ದಾರೆ. ಕೊಲ್ಯ ಸ್ವಾಮೀಜಿಯವರ ಅಭಿಲಾಷೆಯಂತೆ ನಮ್ಮಲ್ಲಿ ಸನ್ಯಾಸಿ ಪರಂಪರೆ ಬೆಳೆಸುವ ಅಗತ್ಯತೆ ಇದೆ ಎಂದು ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಅವರು ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಶನಿವಾರ ನಡೆದ ಸದ್ಗುರು ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿಯವರ ಪುಣ್ಯ ಆರಾಧನಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಾ ಸಂಘದ ದಕ್ಷಿಣ ಮಧ್ಯ ಪ್ರಾಂತೀಯ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ರಾಜಯೋಗಿ ಸದ್ಗುರು ಶ್ರೀ ರಮಾನಂದ ಸ್ವಾಮೀಜಿಯವರು ದೈವೈಕ್ಯರಾಗಿ ಕೊಲ್ಯ ಮೂಕಾಂಬಿಕಾ ಮಠದಲ್ಲಿ ಶೂನ್ಯ ಆವರಿಸಿದ್ದು, ಮುಂದಿನ ದಿವಸಗಳಲ್ಲಿ ಎಲ್ಲಾ ಮಠಾಧೀಶರು, ಭಕ್ತರೆಲ್ಲರೂ ಸೇರಿ ಇಲ್ಲಿ ಆವರಿಸಿದ ಶೂನ್ಯವನ್ನು ಅಳಿಸುವ ಶ್ರದ್ಧಾ,ಭಕ್ತಿಯ ಕೈಂಕರ್ಯಗಳನ್ನು ನಡೆಸಬೇಕೆಂದು ಅಭಿಪ್ರಾಯಪಟ್ಟರು.
ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅವಿರತ ಸೇವೆಗೈದು ಸಮಾಜದ ಬಡ ವರ್ಗದ ಜನರಿಗೆ ಧೈರ್ಯ ತುಂಬಿದ್ದ ಸ್ವಾಮೀಜಿಗಳು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಒಕ್ಕೊರಳ ಇಂಗಿತ
ಕೊಲ್ಯ ಸ್ವಾಮೀಜಿಗಳು ತಮ್ಮ ಜೀವಿತಾವಧಿಯಲ್ಲಿ ಯೋಗ್ಯ ಶಿಷ್ಯರು ಯಾರೂ ದೊರಕದ ಕಾರಣ ಯಾರಿಗೂ ಧೀಕ್ಷೆ ನೀಡದಿದ್ದರೂ ಸಮರ್ಥ ಯೋಗ್ಯರು ಸಿಕ್ಕಲ್ಲಿ ಮಠದ ಉತ್ತಾರಾಧಿಕಾರಿಯನ್ನಾಗಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಸೇರಿದಂತೆ ಅನೇಕರು ಅಭಿಪ್ರಾಯ ಪಟ್ಟರು.
ಕೃಷ್ಣ ಶಿವಕೃಪಾ ಕುಂಜತ್ತೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪೇಜಾವರ ಮಠದ ಪ್ರತಿನಿಧಿಗಳಾದ ಶಶಾಂಕ್ ಆಚಾರ್ಯ, ವಿಷ್ಣು ಆಚಾರ್ಯ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಬಲ್ಯೊಟ್ಟು ಕ್ಷೇತ್ರದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೊಲ್ಯ ಶ್ರೀ ನಾಗಬ್ರಹ್ಮ ಕ್ಷೇತ್ರದ ಧರ್ಮಧರ್ಶಿ ಭಾಸ್ಕರ್ ಐತಾಳ್, ಆರೋಗ್ಯ ಸಚಿವ ಯು.ಟಿ ಖಾದರ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮಧರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಬಿಜೆಪಿ ಜಿಲ್ಲಾ ಮುಖಂಡರಾದ ರವೀಂದ್ರಶೆಟ್ಟಿ ಉಳಿದೊಟ್ಟು, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್, ವಿಶ್ವಹಿಂದೂ ಪರಿಷತ್‌ನ ಪ್ರಮುಖರಾದ ಪ್ರೊ.ಎಮ್.ಬಿ.ಪುರಾಣಿಕ್, ಪಿ.ಎಸ್ ಪ್ರಕಾಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಾಟ್ಯನೀಕೇತನದ ಮೋಹನ್ ಕುಮಾರ್ ಉಳ್ಳಾಲ್, ಉದ್ಯಮಿ ಡಾ.ಎ.ಜೆ ಶೆಟ್ಟಿ, ಕೊಲ್ಯ ಸ್ವಾಮೀಜಿಗಳ ಪೂರ್ವಾಶ್ರಮದ ಗುರುಗಳಾದ ಪ್ರೊ.ಬಿ.ಅರ್ತಿಕಜೆ, ಮಹಾಬಲ ಶೆಟ್ಟಿ, ಯಾದವ ಸಭಾದ ಮುಖಂಡರಾದ ಮಧುಸೂಧನ್ ಆಯರ್, ಕಾಪಿಕಾಡು ಉಮಾಮಹೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ ಶೇಖರ್, ರಮಾನಂದಾಶ್ರಮದ ಸೇವಾ ಸಮಿತಿ ಹಿರಿಯರಾದ ಗಂಗಾಧರ ನೆಲ್ಲಿಸ್ಥಳ,ಪೊಸಕುರಲ್ ವಿದ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು.